ಉಡುಪಿ, ಜು 24 (Daijiworld News/MSP): ಅಕ್ರಮ ಗೋ ಸಾಗಾಟಕ್ಕೆ ಸಹಕಾರ ಕೊಡುತ್ತಿದ್ದ ಆರೋಪದಡಿ ಬಂಧಿತನಾಗಿ , ಆ ಬಳಿಕ ಜಾಮೀನು ಮೇಲೆ ಬಿಡುಗಡೆಗೊಂಡಿದ್ದ ಮಲ್ಪೆ ಕರಾವಳಿ ಕಾವಲು ಪಡೆಯ ಹೆಡ್ ಕಾನ್ ಸ್ಟೆಬಲ್ ಸಂತೋಷ್ ಶೆಟ್ಟಿ (37) ಇವರು ಮಂಗಳವಾರ ಆತ್ಮಹತ್ಯೆ ಯತ್ನಿಸಿದ್ದು ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳವಾರ ಮಧ್ಯಾಹ್ನ ಆದಿ ಉಡುಪಿ ಸಮೀಪದ ತನ್ನ ಕಾರಿನಲ್ಲಿ ನಿದ್ರೆ ಮಾತ್ರೆಗಳನ್ನು ಸೇವಿಸಿ , ಅನಂತರ ತನ್ನ ಮೊಬೈಲ್ ನಿಂದ ಎಸ್ಪಿಗೆ ಸಂದೇಶ ರವಾನಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಇವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎಸ್ಪಿಗೆ ಕಳುಹಿಸಿದ ಸಂದೇಶದಲ್ಲಿ, "ನಾನು ಯಾವುದೇ ತಪ್ಪು ಎಸಗಿಲ್ಲ, ಘಟನೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ" ತಿಳಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಕಾರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದ ಸಂತೋಷ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
'ಹಣ ಪಡೆದು ಅಕ್ರಮ ಜಾನುವಾರು ಸಾಗಾಟಕ್ಕೆ ಅನುವು ಮಾಡಿಕೊಡುತ್ತಿದ್ದರು' ಎಂದು ಪ್ರಕರಣದಲ್ಲಿ ಬಂಧಿತ ಆರೋಪಿಗಳು ನೀಡಿದ ಮಾಹಿತಿಯಂತೆ ಸಂತೋಷ್ ಶೆಟ್ಟಿ ಹಾಗೂ ಮಂಕಿ ಪೊಲೀಸ್ ಠಾಣೆಯ ಸಿಬ್ಬಂದಿ ವಿನೋದ್ ಗೌಡ ಎಂಬವರನ್ನು ಕೋಟ ಪೊಲೀಸರು ಬಂಧಿಸಿದ್ದರು. ನ್ಯಾಯಾಲಯ ಇವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು . ಸೋಮವಾರವಷ್ಟೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.