ಬಂಟ್ವಾಳ,ಸೆ.೦೨ : ಇಲ್ಲೊಂದು ಊರಿದೆ. ಈ ಊರಿನ ಹೆಸರು ಸಂಚಯಗಿರಿ.. ಈ ಊರು ಇವತ್ತು ನಗರ ಪ್ರದೇಶಗಳಿಗೆ ಮಾದರಿಯಾಗಿ ಬೆಳೆದು ನಿಂತಿದೆ. ಕಾರಣ ಇಷ್ಟೇ, ಈ ಊರಿನ ಸುತ್ತ ಮುತ್ತ ಕಸ, ಕಡ್ಡಿ ಯಾವುದೂ ಕಾಣ ಸಿಗುವುದಿಲ್ಲ.. ರಸ್ತೆ ಬದಿಗಳಲ್ಲಿ ಪ್ಲಾಸ್ಟಿಕ್ ಪೇಪರ್ ಇಲ್ವೇ ಇಲ್ಲ.. ಊರಿನ ಚರಂಡಿಯಲ್ಲಿ ಕೊಳಚೆ ನೀರು ತುಂಬಿರುವುದಿಲ್ಲ.. ಅನಗತ್ಯವಾಗಿ ಬೆಳೆಯುವ ಕಳೆ ಗಿಡಗಳು ಸಂಚಯಗಿರಿ ಪರಿಸರದಲ್ಲಿ ಕಾಣ ಸಿಗುವುದಿಲ್ಲ.. ಇವೆಲ್ಲವೂ ಇಲ್ಲಿ ಸಾಧ್ಯವಾಗಿದ್ದು ಒಬ್ಬ ಸಮಾಜ ಸೇವಕನಿಂದ.. ಅವರೇ ಎ. ದಾಮೋದರ್.
ಬೇರೆ ಬೇರೆ ಊರುಗಳಿಗೆ ಮಾದರಿಯಾಗಿರುವ ಈ ಊರಿನ ಸ್ವಚ್ಛತೆಗೆ ನಿವೃತ್ತ ಸರಕಾರಿ ಅಧಿಕಾರಿ ಎ. ದಾಮೋದರ್ ಅವರ ಶ್ರಮವೇ ಕಾರಣ. ಈ ಸಮಾಜ ಸೇವಕ ತಾನೂ ಮಾಡುವ ಕೆಲಸಗಳಿಗೆ ಯಾವುದೇ ಫಲಾ ಅಪೇಕ್ಷೆಯನ್ನು ಬಯಸದೆ ಅಲ್ಲಿನ ಪರಿಸರ ಸೌಂದರ್ಯದ ಕಾಳಜಿ ಮಾಡುತ್ತಾರೆ. ನ್ಯಾಯಾಲಯದಲ್ಲಿ ಅಮೀನ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಇವರು ಕಳೆದ ೩೬ ವರ್ಷಗಳಿಂದ ಸಂಚಯಗಿರಿಯಲ್ಲಿ ವಾಸಿಸುತ್ತಿದ್ದಾರೆ. ವಾರ್ಡ್ನ ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದು ಪರಿಸರದಲ್ಲಿ ಯಾವುದೇ ಕಸ ಬೀಳದಂತೆ ನೋಡಿಕೊಳ್ಳುತ್ತಾರೆ. ಮನೆ ಮನೆಗಳಲ್ಲಿ ಸಂಗ್ರಹವಾಗುವ ಕಸವನ್ನು ಪುರಸಭೆಯವರು ವಿಲೇವಾರಿ ಮಾಡಿಕೊಳ್ಳುವಲ್ಲಿ ಮುತುವರ್ಜಿ ವಹಿಸುತ್ತಾರೆ. ನಿತ್ಯ ಕಸಬರಿಕೆ ಹಿಡಿದು ವಾರ್ಡ್ ಗುಡಿಸುತ್ತಾರೆ. ಕಳೆ ಗಿಡಗಳು ಬೆಳೆದಾಗ ಅವುಗಳನ್ನು ಕೀಳಿ ಸ್ವಚ್ಛಗೊಳಿಸುತ್ತಾರೆ. ಚರಂಡಿಗಳಲ್ಲಿ ನೀರು ನಿಲ್ಲದಂತೆ ಗಮನವಹಿಸುತ್ತಾರೆ. ಆದರೆ ಇದಕ್ಕೆ ಪ್ರತಿಯಾಗಿ ಇವರು ಯಾರಿಂದಲೂ ಯಾವುದನ್ನು ಬಯಸುವುದಿಲ್ಲ.
ಅಪೂರ್ವವಾದ ಸಾಧನೆ ಮಾಡುತ್ತಿರುವ ಎ. ದಾಮೋದರ್ ಬರಿ ಊರಿನ ಸ್ವಚ್ಛತೆಗೆ ಮಾತ್ರ ಗಮನಕೊಟ್ಟಿಲ್ಲ. ಬದಲಾಗಿ ಸಂಚಯಗಿರಿ ಊರಿನಲ್ಲಿರುವ ಎಲ್ಲ ಮನೆಯಿಂದಲೂ ಪುರಸಭೆಗೆ ಮನೆ ತೆರಿಗೆ ಸಂದಾಯವಾಗುವಂತೆ ನೋಡಿಕೊಳ್ಳುತ್ತಾರೆ. ವಾರ್ಡ್ನಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಪರಿಹಾರವಾಗುವಂತೆ ನೋಡಿಕೊಳ್ಳುತ್ತಾರೆ. ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ, ಟೆಲಿಫೋನ್ ಸಮಸ್ಯೆ ಹೀಗೆ ಏನೇ ಸಮಸ್ಯೆಗಳನ್ನು ಹೇಳಿಕೊಂಡರೂ ತಕ್ಷಣ ಸ್ಪಂದಿಸಿ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿ ಜನರ ಸಮಸ್ಯೆಯನ್ನು ನಿಸ್ವಾರ್ಥವಾಗಿ ಪರಿಹರಿಸಿಕೊಡುತ್ತಾರೆ.
73 ರ ಹರೆಯದ ಇಳಿ ವಯಸ್ಸಿನಲ್ಲೂ ಪರಿಸರದ ಸ್ವಚ್ಛತೆಯೊಂದಿಗೆ ಜನ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ದಾಮೋದರ್ ಅವರ ನಿಸ್ವಾರ್ಥ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು ಅನ್ನೋದು ಇಲ್ಲಿನ ಗ್ರಾಮಸ್ಥರ ಆಗ್ರಹ..