ನವದೆಹಲಿ, ಜು 24 (Daijiworld News/MSP): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೂನ್ 30ರಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ರನ್ ವೇ ಯಿಂದ ಜಾರಿ ಚರಂಡಿ ದಾಟಿ ನಿಂತ ಘಟನೆಗೆ ಸಂಬಂಧಿಸಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಪೈಲಟ್ನ ಲೈಸೆನ್ಸ್ ರದ್ದುಪಡಿಸಿದೆ.
ಪೈಲಟ್ನ ಪರವಾನಿಗೆಯನ್ನು ಒಂದು ವರ್ಷದವರೆಗೆ ಅಮಾನತು ಮಾಡಲಾಗಿದೆ. ವಿಮಾನ ಲ್ಯಾಂಡಿಂಗ್ ಆಗುವ ಸಂದರ್ಭದಲ್ಲಿ ತುಂಬಾ ವೇಗವನ್ನು ಹೊಂದಿತ್ತು ಹಾಗೂ ವಿಳಂಬವಾಗಿ ನೆಲಕ್ಕೆ ಮುಟ್ಟಿತ್ತು. ಹೀಗಾಗಿ ವಿಮಾನಕ್ಕೆ ಹಾನಿಯಾಗಿದೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಮಹಾ ನಿರ್ದೇಶನಾಲಯ ಈ ಅಂಶಗಳನ್ನು ಅವಲಂಭಿಸಿ ಈ ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ. ಘಟನೆ ನಡೆದ ದಿನದಿಂದ ಒಂದು ವರ್ಷದವರೆಗೆ ಅಮಾನತು ಅನ್ವಯವಾಗಲಿದೆ.
ಜೂನ್ 30ರಂದು ನಡೆದ ಅವಘಡದ ಸಂದರ್ಭ ವಿಮಾನದಲ್ಲಿ ಒಟ್ಟು 183 ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಯಾವುದೇ ಜೀವಾಪಾಯ ಸಂಭವಿಸಿರಲಿಲ್ಲ. ಘಟನೆಯಿಂದ ವಿಮಾನಕ್ಕೆ ಹಾನಿಯಾಗಿತ್ತು. ಮಹಾ ನಿರ್ದೇಶನಾಲಯ ಈ ವಿದ್ಯಮಾನ ಅತ್ಯಂತ ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶ ನೀಡಿತ್ತು.