ಮಂಗಳೂರು, ಡಿ 15: ನಗರದ ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟೆಂಟ್ ಚರ್ಚ್ಗಳಲ್ಲಿ ಹಾಗೂ ಮನೆಗಳಲ್ಲಿ ಕ್ರಿಸ್ಮಸ್ ಆಚರಣೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ.
ಕ್ರಿಸ್ಮಸ್ ಆಚರಣೆಯ ಮೊದಲ ಹಂತದ ಆಗಮ ಕಾಲ ಪೂರ್ಣಗೊಳ್ಳುತ್ತಿದ್ದು, ಚರ್ಚ್ ಆವರಣದೊಳಗೆ ನಕ್ಷತ್ರಗಳು ಆಕಾಶಕ್ಕೆ ಏರಿದೆ. ಬಲೂನ್ಗಳ ಚಿತ್ತಾರ, ಹಚ್ಚ ಹಸುರಿನ ಎತ್ತರದ ಕ್ರಿಸ್ಮಸ್ ಟ್ರೀಗಳು ಕಂಗೊಳಿಸುತ್ತಿದೆ. ಪ್ರಭು ಏಸುವನ್ನು ಬರಮಾಡಿಕೊಳ್ಳಲು ವಿಭಿನ್ನ ವಿನ್ಯಾಸದ ಗೋದಲಿಗಳ ತಯಾರಿ, ಸಾಂತಾಕ್ಲಾಸ್ನ ಪ್ರತಿಬಿಂಬ, ಗಂಟೆ ಹೀಗೆ ನಾನಾ ತಯಾರಿಗಳ ಮೂಲಕ ಸಡಗರ, ಸಂಭ್ರಮದಿಂದ ಏಸುವಿನ ಜನ್ಮ ದಿನವನ್ನು ಆಚರಿಸಲು ತಯಾರಿಗಳು ಸಾಗಿವೆ.
ಮಾರಿಕಟ್ಟೆಯಲ್ಲಿ ಮಾರಾಟಗಾರರು ಕ್ರಿಸ್ಮಸ್ ಆಚರಣೆಯ ಸಾಮಗ್ರಿಗಳ ಆಕರ್ಷಕ ಜೋಡಣೆ ಮೂಲಕ ಗ್ರಾಹಕರನ್ನು ಕೈಬೀಸಿ ಕರೆಯುತ್ತಿದ್ದಾರೆ. ಮಂಗಳೂರು ನಗರದ ನಾನಾ ಕಡೆ ಫ್ಯಾನ್ಸಿ ಸ್ಟೋರ್ಗಳಲ್ಲಿ ಮೇರಿ ಕ್ರಿಸ್ಮಸ್ ಸಂದೇಶದ ಕ್ರಿಸ್ಮಸ್ ಕಾರ್ಡ್ಗಳು, ಉಡುಗೊರೆಗಳು, ಏಸು ಕ್ರಿಸ್ತ ಮತ್ತು ಮೇರಿಮಾತೆಯ ಭಾವಚಿತ್ರಗಳು, ವಿಭಿನ್ನ ವಿನ್ಯಾಸದ ಕ್ಯಾಂಡಲ್ಗಳು, ಸಾಂತಾಕ್ಲಾಸ್ನ ಪ್ರತಿಬಿಂಬ, ಗೃಹಾಲಂಕಾರಕ್ಕೆ ಅಗತ್ಯವಾದ ತೋರಣಗಳ ಖರೀದಿ ಭರಾಟೆ ಜೋರಾಗಿ ನಡೆದಿದೆ.