ಮಂಗಳೂರು, ಜು 23 (DaijiworldNews/SM): ಜಿಲ್ಲೆಯಲ್ಲಿ ಕಂಡು ಬಂದಿರುವ ಡೆಂಗ್ಯೂ ರೋಗ ನಿಯಂತ್ರಣಕ್ಕೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಎಚ್. ಅನಿಲ್ ಕುಮಾರ್ ಸೂಚಿಸಿದ್ದಾರೆ.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಈಗಾಗಲೇ ನಡೆಸುತ್ತಿರುವ ಚಟುವಟಿಕೆಗಳನ್ನು ತೀವ್ರಗೊಳಿಸಬೇಕು. ಇದರಲ್ಲಿ ಯಾವುದೇ ಲೋಪವನ್ನು ಸಹಿಸಲಾಗದು. ಆರೋಗ್ಯ ಇಲಾಖೆಯು ಮತ್ತು ನಗರಪಾಲಿಕೆ ಯುದ್ದೋಪಾಧಿಯಲ್ಲಿ ತೊಡಗಿಕೊಳ್ಳುವಂತೆ ಅವರು ನಿರ್ದೇಶಿಸಿದರು.
ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ, ಡೆಂಗ್ಯೂ ನಿಯಂತ್ರಣದಲ್ಲಿ ಜಿಲ್ಲಾಡಳಿತವನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗಿದೆ. ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳ ಬಗ್ಗೆ ನಿಗಾ ಇಡಲು, ನಿರ್ಲಕ್ಷ್ಯ ತೋರಿದ್ದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ ಎಂದು ಹೇಳಿದರು.
ಸರ್ಕಾರಿ ಯೋಜನಾ ಕಾರ್ಯಗಳ ಬಗ್ಗೆ ಎಲ್ಲಾ ತಾಲೂಕುಗಳ ತಹಶೀಲ್ದಾರರು ನಿಗಾ ವಹಿಸಿ ಕಾರ್ಯ ನಿರ್ವಹಿಸಿಬೇಕು. ಯಾವುದೇ ಸರ್ಕಾರಿ ಯೋಜನೆಗಳನ್ನು ವಿಳಂಬ ಮಾಡದೇ ಸಕಾಲದಲ್ಲಿ ನಿರ್ವಹಿಸಿಬೇಕು. ಇದರಿಂದ ಯಾವುದೇ ಕೆಲಸ ಕಾರ್ಯಗಳಿಗೂ ಅಡಚಣೆಯಾಗುವುದಿಲ್ಲ ಸಾರ್ವಜನಿಕರಿಗೆ ಸರಿಯಾದ ಸಮಯದಲ್ಲಿ ಸ್ಪಂದನೆ ದೊರಕುತ್ತದೆ ಎಂದು ತಿಳಿಸಿದರು.