ಕುಂದಾಪುರ, ಜು 23 (Daijiworld News/MSP): ಕಾಡಿನಲ್ಲಿರಬೇಕಾದ ಜಿಂಕೆಯ ಮೃತದೇಹವೊಂದು ಸಮುದ್ರದಲ್ಲಿ ತೇಲಿ ಬಂದು ಆತಂಕ ಸೃಷ್ಟಿಸಿದ ಘಟನೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಕೊಮೆ ಕಡಲತೀರದಲ್ಲಿ ನಡೆದಿದೆ.
ಕಾಡು ಪ್ರಾಣಿಗಳ ಹತ್ಯೆ ಘೋರ ಅಪರಾಧ. ಆದರೆ ಕಾಡುಪ್ರಾಣಿಗಳಿರಬೇಕಾದಲ್ಲಿ ಮಾನವರು ಮನೆಕಟ್ಟಿಕೊಂಡು ಕೂತರೆ ಪಾಪ ಅವುಗಳಾದರೂ ಎಲ್ಲಿಗೆ ಹೋಗಬೇಕು? ಇದೆಲ್ಲದರ ಪರಿಣಾಮ ಕೆಲವಾರು ವರ್ಷಗಳಿಂದ ಉಡುಪಿ ಜಿಲ್ಲೆಯ ಸಾಯಿಬ್ರಕಟ್ಟೆಯಿಂದ ಕೋಟ, ತೆಕ್ಕಟ್ಟೆ, ವಕ್ವಾಡಿ, ಬ್ರಹ್ಮಾವರದ ಹೆಚ್ಚಿನ ಪೇಟೆ, ಗ್ರಾಮೀಣ ಭಾಗಗಳನ್ನು ಸೇರುತ್ತಿವೆ ಇದರಿಂದ ಕೆಲವಾರು ವರ್ಷಗಳಲ್ಲಿ ಚಿರತೆ, ಕಡವೆ, ಜಿಂಕೆ, ಕಾಡುಕೋಣ, ಕಾಡುಪಾಪ ಇನ್ನಿತರ ಪ್ರಾಣಿಗಳು ನಾಡು ಸೇರುತ್ತಿವೆ. ಇವುಗಳಿಗೆ ಆಹಾರದ ಕೊರತೆ ಒಂದೆಡೆಯಾದರೆ ಇನ್ನೊಂದೆಡೆ ಇರಲು ಕಾಡು ಇಲ್ಲದ ಸ್ಥಿತಿ ನಿರ್ಮಾಣಗೊಂಡಿದೆ. ಈ ಹಿನ್ನಲ್ಲೆಯಲ್ಲಿ ಹೆಚ್ಚಿನ ಪ್ರಾಣಿಗಳು ಹೊಳೆ, ಬಾವಿ ಇದೀಗ ಸಮುದ್ರದ ಪಾಲಾಗುತ್ತಿವೆ.
ತೆಕ್ಕಟ್ಟೆಯ ಕೊಮೆ ಸಮುದ್ರ ದಡದಲ್ಲಿಯೂ ಇಂಹುದೆ ಘಟನೆ ನಡೆದಿದ್ದು, ಒಂದು ಜಿಂಕೆಯ ಮೃತದೇಹ ಸಮುದ್ರದಲ್ಲಿ ತೇಲಿ ಬಂದಿದೆ. ಸ್ಥಳೀಯ ಮೀನುಗಾರರು ಜಿಂಕೆ ದೇಹವನ್ನು ಸಮುದ್ರದಲ್ಲಿ ಕಂಡ ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಕೋಟ ಠಾಣೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಕುಂದಾಪುರ ವಲಯ ಉಪ ಅರಣ್ಯಾಧಿಕಾರಿ ಉದಯ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಪಶು ವೈದ್ಯಾಧಿಕಾರಿಗಳ ಮೂಲಕ ಮೇಲಾಧಿಕಾರಿಗಳ ಗಮನಕ್ಕೆ ತಂದು ಅಲ್ಲೆ ಅಂತ್ಯಸಂಸ್ಕಾರ ನೆರವೇರಿಸಿದರು.
ಈ ಭಾಗದಲ್ಲಿ ಬಯಲು ಪ್ರದೇಶ ಹಾಗೂ ಬೃಹತ್ ಹೊಳೆಗಳು ಸಮುದ್ರ ಸೇರುತ್ತವೆ. ಮಳೆಗಾಲ ಆದ್ದರಿಂದ ನೀರಿನ ಹರಿವು ಬಾರಿ ಪ್ರಮಾಣದಲ್ಲಿರುವುದರಿಂದ ಹೊಳೆಯಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿರುವ ಸಾಧ್ಯತೆಗಳಿದ್ದು, ಆ ಮೂಲಕ ಸಮುದ್ರ ಸೇರಿರಬಹುದು ಎಂದು ಅಂದಾಜಿಸಲಾಗಿದೆ.