ಮಂಗಳೂರು, ಜು 22 (Daijiworld News/MSP): ಕರಾವಳಿಯಲ್ಲಿ ಕಳೆದೆರೆಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮಂಗಳೂರಿನಲ್ಲಿ ಹಲವೆಡೆ ಭೂ ಕುಸಿತ ಉಂಟಾಗಿದೆ. ಸೋಮವಾರ ಬೆಳಗ್ಗೆಯಷ್ಟೇ ಕದ್ರಿ ಬಿಜೈ ರಸ್ತೆಯಲ್ಲಿರುವ ಗುಡ್ಡವೊಂದು ರಸ್ತೆಗೆ ಕುಸಿದು ಸಂಚಾರ ಅಸ್ತವ್ಯಸ್ಥವಾಗಿತ್ತು.
ಇನ್ನು ಉಳ್ಳಾಲ ಸಮೀಪದ ಅಂಬ್ಲಮೊಗರು ಮದಕ ಜಂಕ್ಷನ್ ಬಳಿ ಹಾಗೂ ಕುಂಜತ್ ಬೈಲ್ ಬಳಿ ಭೂಕುಸಿತ ಸಂಭವಿಸಿ ಎರಡು ಮನೆಗಳಿಗೆ ಹಾನಿಯಾಗಿದೆ. ಗುಡ್ಡ ಕುಸಿತದ ಪರಿಣಾಮ ಮನೆಗಳ ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬ ಧರೆಗುರುಳಿದೆ.
ಮನೆಯವರ ಸಮಯ ಪ್ರಜ್ಞೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿಗಳು ಆಗಮಿಸಿ ವಿದ್ಯುತ್ ಕಂಬ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ವರ್ಷವೂ ಮಳೆಯ ಅಬ್ಬರಕ್ಕೆ ಅಂಬ್ಲಮೊಗರುವಿನಲ್ಲಿ ಭೂ ಕುಸಿತವಾಗಿತ್ತು.
ಇನ್ನೊಂದೆಡೆ ನಗರದ ಕುಂಜತ್ ಬೈಲ್ ನಲ್ಲಿಯೂ ಧರೆ ಕುಸಿದಿದೆ. ಪರಿಣಾಮ ಅಲ್ಲೇ ಸನಿಹದಲ್ಲಿದ್ದ ಮನೆಯ ಒಂದು ಪಾಶ್ವ ಭೂಕುಸಿತಕ್ಕೆ ಸಿಲುಕಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿಯಾದ ವರದಿಗಳಾಗಿಲ್ಲ.
ಹವಾಮಾನ ಇಲಾಖೆಯ ಪ್ರಕಟಣೆಯಂತೆ ಇನ್ನೆರಡು ದಿನಗಳ ಕಾಲ ಕರಾವಳಿಯಲ್ಲಿ ಭಾರೀ ಮಳೆ ಸುರಿಯಲಿದೆ.