ಕಾಸರಗೋಡು ಜು.22 (Daijiworld News/RD): ಕಾಸರಗೋಡು ಜಿಲ್ಲೆಯಲ್ಲಿ ವರ್ಷ ಧಾರೆ ಮುಂದುವರಿದಿದ್ದು, ನಾಳೆಯೂ ಕೂಡ ವಿಪರೀತ ಮಳೆಯಾಗುವ ಸಾಧ್ಯತೆ ಇದ್ದು ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದೆ. ನಾಳೆಯೂ ಕೂಡ ಜಿಲ್ಲೆಯ ಎಲ್ಲಾ ಶಾಲಾಗಳಿಗೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.
ಆದಿತ್ಯವಾರ ಮಧ್ಯಾಹ್ನದ ವೇಳೆಗೆ ಅಲ್ಪ ವಿರಾಮ ಕಂಡುಬಂದರೂ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದೆ. ಭಾರೀ ಮಳೆ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲಾ - ಕಾಲೇಜುಗಳಿಗೆ ಇಂದು ರಜೆ ನೀಡಲಾಗಿದ್ದು, ಜಿಲ್ಲೆಯಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ನಾಳೆ ರೆಡ್ ಅಲರ್ಟ್ ಘೋಷಿಸಿದ್ದು , ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸಂಬಂಧಪಟ್ಟ ಇಲಾಖೆಗೆ ಸೂಚಿಸಿದೆ.
ಮಳೆಯಿಂದ ಜಿಲ್ಲೆಯಾದ್ಯಂತ ಭಾರೀ ಪ್ರಮಾಣದ ನಾಶ ಉಂಟಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಎರಡು ಮನೆಗಳು ಪೂರ್ಣವಾಗಿ, 92 ಮನೆಗಳು ಭಾಗಶಃವಾಗಿ ಹಾನಿಗೊಂಡಿದೆ. 115 ಹೆಕ್ಟರ್ ಸ್ಥಳದ ಕೃಷಿ ಹಾನಿಯಾಗಿದೆ. ಕಳೆದ ಎರಡು ದಿನಗಳ ಅವಧಿಯಲ್ಲಿ 55 ಹೆಕ್ಟರ್ ಪ್ರದೇಶದಲ್ಲಿನ ಕೃಷಿ ನಾಶಗೊಂಡಿದೆ. ಜಿಲ್ಲೆಯ 24 ಗ್ರಾಮಗಳು ಪ್ರವಾಹಕ್ಕೆ ಸಿಲುಕಿದ್ದು, 163 ವಿದ್ಯುತ್ ಕಂಬಗಳು, ಎರಡು ಟ್ರಾನ್ಸ್ ಫಾರ್ಮರ್ಗಳು ನೆಲಕಚ್ಚಿದ್ದು, ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ಥಗೊಂಡಿದೆ. ಜೊತೆಗೆ ಬಂದ್ಯೋಡು, ಕೊಕ್ಕೆಚಾಲ್ನಲ್ಲಿ ಸಂಶುದ್ದೀನ್ ಎಂಬವರ ಬಾವಿ ಈಗಾಗಲೇ ಸಂಪೂರ್ಣ ಕುಸಿದು ಬಿದ್ದಿದೆ.
ಜಿಲ್ಲೆಯಲ್ಲಿ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ ಹಲವೆಡೆ ಭೂಕುಸಿತ ಉಂಟಾಗಿ ಸಂಚಾರಕ್ಕೂ ಅಡ್ಡಿಯಾಗಿದೆ.