ಭಟ್ಕಳ, ಜು 22 (Daijiworld News/RD): ಕಳೆದ ಕೆಲವು ವರ್ಷಗಳಿಂದ ಚಿಕ್ಕ ಮಳೆ ಬಂದರೂ ಸಹ ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ನಿಂತು ವಾಹನ ಸವಾರರು ಪರದಾಡುವ ಸ್ಥಿತಿ ಇದ್ದರೂ ಸಹ ಆಡಳಿತ ಮಾತ್ರ ನಿರ್ಲಕ್ಷ ವಹಿಸಿದ್ದು ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳದೆ ಇದ್ದ ಕಾರಣ ರವಿವಾರ ಬೆಳಿಗ್ಗೆಯಿಂದ ಸಂಜೆಯ ತನಕ ಸುರಿದ ಭಾರೀ ಮಳೆಗೆ ಭಟ್ಕಳದ ಬಹುತೇಕ ತಗ್ಗು ಪ್ರದೇಶಗಳು ಅಪಾಯದ ಅಂಚಿಗೆ ತಲುಪಿದೆ.
ರಾಷ್ಟ್ರೀಯ ಹೆದ್ದಾರಿಯೇ ಒಂದು ಹಳ್ಳವಾಗಿದ್ದು ಇದು ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ಇಲ್ಲಿನ ರಂಗೀಕಟ್ಟೆಯಿಂದ ಮೂಢಭಟ್ಕಳದ ತನಕ ಬಹುತೇಕ ಕಡೆಗಳಲ್ಲಿ ಮುಖ್ಯವಾಗಿ ರಂಗೀಕಟ್ಟೆ, ಶಂಶುದ್ದೀನ್ ಸರ್ಕಲ್, ಮಣ್ಕುಳಿ, ಗಣೇಶ ನಗರಗಳ ಹೆದ್ದಾರಿಯ ಮೇಲೆ ಸುಮಾರು ಒಂದರಿಂದ ಮೂರು ಅಡಿಗಳಷ್ಟು ನೀರು ನಿಂತಿದ್ದು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಾದಾಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಬಿದ್ದ ಘಟನೆ ಕೂಡಾ ನಡೆದಿದೆ.
ಜು.21 ರ ಬೆಳಿಗ್ಗೆ 8 ಗಂಟೆಗೂ ಪೂರ್ವ 24 ತಾಸುಗಳಲ್ಲಿ ಭಟ್ಕಳದಲ್ಲಿ 31.4 ಮಿ.ಮಿ. ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಸಮಯದಲ್ಲಿ 53 ಮಿ.ಮಿ. ಮಳೆಯಾಗಿತ್ತು. ಜು.21 ರ ತನಕ ಕಳೆದ ವರ್ಷ ಒಟ್ಟೂ ಮಳೆಯ ಪ್ರಮಾಣ 2160.5 ಆಗಿದ್ದರೆ ಈ ವರ್ಷ ಭಾರೀ ಕಡಿಮೆ ಅಂದರೆ 1621.8 ಆಗಿದೆ. ಮಳೆಗಾಲ ಆರಂಭವಾದಾಗಿನಿಂದ ಇಲ್ಲಿಯ ತನಕ ಹೆಚ್ಚು ಮಳೆಯಾಗಿಲ್ಲವಾದರೂ ಆಗಾಗ ಮಳೆ ಬೀಳುತ್ತಿರುವುದರಿಂದ ತೋಟಗಳಿಗೆ ಹಾಗೂ ರೈತರಿಗೆ ಅನುಕೂಲವಾಗಿತ್ತು ಎನ್ನಲಾಗಿದೆ. ತಾಲೂಕಿನ ಬೈಲೂರು, ಮುರ್ಡೇಶ್ವರ, ಬೇಂಗ್ರೆ, ಶಿರಾಲಿ, ಹೆಬಳೆ, ಮಾರುಕೇರಿ, ಕುಂಟವಾಣಿ, ಕಿತ್ರೆ, ಬೆಳಕೆ ಹಾಗೂ ಇತರೆಡೆಗಳಲ್ಲಿ ನೀರಿನ ಮಟ್ಟ ಎರಿಕೆಯಾಗಿದ್ದು ಇಂದಿನ ಮಳೆಗೆ ಅಪಾಯದ ಅಂಚಿನಲ್ಲಿದೆ. ರಾತ್ರಿಯೂ ಕೂಡಾ ಇದೇ ರೀತಿ ಮಳೆ ಸುರಿದರೆ ವೆಂಕಟಾಪುರ ನದಿಯ ನೀರು ಉಕ್ಕಿ ಹರಿಯುವ ಸಾಧ್ಯತೆ ಇದ್ದು, ಹೆಬಳೆ ಭಾಗದಲ್ಲಿ ಅಪಾಯದ ಸಾಧ್ಯತೆ ಇದೆ.
ನಗರದ ಕೋಗ್ತಿ ಪ್ರದೇಶದಲ್ಲಿ ಚರಂಡಿಗಳನ್ನು ಮಾಡಲು ಸ್ಥಳಾವಕಾಶ ನೀಡದೇ ಇರುವುದರಿಂದ ಶಂಶುದ್ಧೀನ್ ಸರ್ಕಲ್ನಿಂದ ರಂಗೀಕಟ್ಟೆಯ ತನಕದ ನೀರು ಹೋಗಲು ಸ್ಥಳಾವಕಾಶವೇ ಇಲ್ಲ ಎನ್ನುವಂತಾಗಿದೆ. ಮಾರುತಿ ನಗರ, ಕೋಗ್ತಿ, ಆಜಾದ ನಗರ ಇತ್ಯಾದಿ ಕಡೆಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ನೀರು ಮನೆಗಳಿಗೆ ನುಗ್ಗಿ ಹಾನಿಯಾಗಿದ್ದು ಪ್ರತಿ ಬಾರಿಯೂ ಕೂಡಾ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೂ ಆಡಳಿತ ವ್ಯವಸ್ಥೆ ಜಾಗೃತರಾದಂತೆ ಕಂಡು ಬರುತ್ತಿಲ್ಲ. ನಗರದಲ್ಲಿ ಕಟ್ಟಡ ನಿರ್ಮಾಣ ಮಾಡುವಾಗ ಸರಿಯಾದ ರಸ್ತೆ, ಚರಂಡಿಗೆ ಅವಕಾಶವೇ ಇಲ್ಲದಂತೆ ನಿರ್ಮಾಣ ಮಾಡುತ್ತಿರುವುದು ಕೂಡಾ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ಅಲ್ಲದೇ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಚರಂಡಿ ಹೂಳೆತ್ತಲೆಂದೇ ಖರ್ಚು ಮಾಡಿದರೂ ಸಹ ಹೂಳೆತ್ತುವ ಕಾರ್ಯವನ್ನು ಕಾಟಾಚಾರಕ್ಕೆ ಮಾಡಿ ಬಿಲ್ ಮಾಡುವುದು ಕೂಡಾ ಇಂತಹ ಘಟನೆಗಳಿಗೆ ಕಾರಣವಾಗಿದೆ.
ಕಳೆದ ಸುಮಾರು 5 ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದವರು ಹೆದ್ದಾರಿಯನ್ನು ವಶಕ್ಕೆ ಪಡೆದುಕೊಂಡು ಐ.ಆರ್.ಬಿ. ಕಂಪೆನಿಗೆ ನೀಡಿದ್ದರೆ, ಪ್ರತಿ ವರ್ಷವೂ ಉಂಟಾಗುವ ಈ ತೊಂದರೆಗೆ ಕಂಪೆನಿಯವರು ಯಾವುದೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚಿಂತಿಸಿಯೇ ಇಲ್ಲ. ಅನೇಕ ಕಡೆಗಳಲ್ಲಿ ಹೆದ್ದಾರಿಯ ನಿರ್ಮಾಣ ಕಾರ್ಯ ಮಾಡುತ್ತಿದ್ದರೂ ಕೂಡಾ ನೀರು ಸರಾಗವಾಗಿ ಹರಿದು ಹೋಗಲು ಕ್ರಮ ತೆಗೆದುಕೊಂಡಿಲ್ಲದಿರುವುದು ಕೂಡಾ ಮನೆಗಳಿಗೆ ನೀರು ನುಗ್ಗಲು ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ ಮೂಢಭಟ್ಕಳದಿಂದ ಮಣ್ಕುಳಿಯ ತನಕ ಹೆದ್ದಾರಿ ಪಕ್ಕದಲ್ಲಿ ಚರಂಡಿಯನ್ನು ಮಾಡಿದ್ದರೂ ಕೂಡಾ ನೀರು ಯಾವ ಕಡೆಗೂ ಹೋಗಲು ವ್ಯವಸ್ಥೆ ಮಾಡಿಲ್ಲ. ಶಂಶುದ್ಧೀನ್ ಸರ್ಕಲ್ನಲ್ಲಿನ ನೀರನ್ನು ಸಾಗರ ರಸ್ತೆಯ ಮುಖಾಂತರ ಕಂಡೆಕೊಡ್ಲುವಿನ ಮೂಲಕ ವೆಂಕಟಾಪುರ ಹೊಳಗೆ ಹೋಗಲು ವ್ಯವಸ್ಥೆ ಮಾಡಬೇಕು. ರಂಗೀಕಟ್ಟೆಯಿಂದ ವೆಂಕಟಾಪುರದ ಕಡೆಗೆ ಚರಂಡಿಯನ್ನು ಇಳಿಜಾರು ಮಾಡಿ ನಿರ್ಮಾಣ ಮಾಡಿದಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ನೀರು ಮನೆಗಳಿಗೆ ನುಗ್ಗುವುದನ್ನು ತಪ್ಪಿಸಲು ಸಾಧ್ಯವಾಗುವುದು.
ನಗರದ ಮಾರುತಿ ನಗರದಲ್ಲಿ ಹಲವರು ಚರಂಡಿಯ ನೀರು ಹರಿದು ಮುಂದಕ್ಕೆ ಹೋಗಲು ಸ್ಥಳವೇ ಇಲ್ಲವಾಗಿದೆ. ನೀರು ಸರಾಗವಾಗಿ ಹೋಗಲು ಸ್ಥಳವಿಲ್ಲದೇ ಇರುವುದು ಮನೆಗಳಿಗೆ ನೀರು ನುಗ್ಗಲು ಕಾರಣವಾಗಿದೆ. ಕಳೆದ 28 ವರ್ಷಗಳಿಂದ ಪುರಸಭೆಯವರು ನಮ್ಮ ಮನೆ ಎದುರಿಗಿರುವ ಚರಂಡಿಯ ಹೂಳೆತ್ತಿದ್ದನ್ನು ನಾನೆಂದೂ ನೋಡೇ ಇಲ್ಲ ಎನ್ನುತ್ತಾರೆ ವಿಠಲ ಬಾಳೇರಿ, ಯೋಗ ಗುರುಗಳು.
ರಂಗೀಕಟ್ಟೆಯಲ್ಲಿ ಹೆದ್ದಾರಿಗೆ ಅಡ್ಡಲಾಗಿ ಹಾಕಿದ್ದ ಪೈಪ್ನಲ್ಲಿ ಮಣ್ಣು ತುಂಬಿಕೊಂಡಿದ್ದು ಚಿಕ್ಕ ಮಳೆ ಬಂದರೂ ನೀರು ನಿಲ್ಲಲು ಕಾರಣವಾಗಿದೆ. ಇಲ್ಲಿ ಹೆದ್ದಾರಿಯಲ್ಲಿ ಹಾಕಿದ ಪೈಪ್ ಸ್ವಚ್ಚಗೊಳಿಸಬೇಕು. ಕೋಗ್ತಿ (ಸಲ್ಮಾನಾಬಾದ್) ಪ್ರದೇಶದಲ್ಲಿ ಚರಂಡಿಯನ್ನೂ ಬಿಡದೇ ಕಂಪೌಂಡು ಕಟ್ಟಿರುವುದನ್ನು ತೆರವುಗೊಳಿಸಿ ನೀರು ಸರಾಗವಾಗಿ ಹೋಗುವಂತೆ ಮಾಡಬೇಕು. ಆಗ ಮಾತ್ರ ರಂಗೀಕಟ್ಟೆ ಹೆದ್ದಾರಿಯಲ್ಲಿ ನೀರು ನಿಲ್ಲುವುದು ನಿಲ್ಲುತ್ತದೆ ಎಂದು ದೀಪಕ್ ನಾಯ್ಕ, ಹುರುಳಿಸಾಲ್ ಅಭಿಪ್ರಾಯಪಟ್ಟರು.
ಐ.ಆರ್.ಬಿ. ಕಂಪೆನಿಯವರು ಈ ಬಾರಿ ಮಳೆಗಾಲದಲ್ಲಿ ಹೆದ್ದಾರಿ ಪಕ್ಕದಲ್ಲಿ ಎಲ್ಲೆಲ್ಲಿ ನೀರು ನಿಂತು ತೊಂದರೆಯಾಗಿದೆ ಎಂದು ಸರ್ವೆ ಮಾಡಿ ಮುಂದಿನ ವರ್ಷದೊಳಗೆ ಅವುಗಳನ್ನು ಸರಿಪಡಿಸಿಕೊಂಡು ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಕೊಡಬೇಕು ಎಂದು ಫಯ್ಯಾಜ್ ಮುಲ್ಲಾ, ಪುರಸಭಾ ಸದಸ್ಯರು ಹೇಳಿದರು. ಈ ರೀತಿಯಾಗಿ ಇಲ್ಲಿನ ಸಮಸ್ಯೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.