ಬಂಟ್ವಾಳ, ಜು 22 (Daijiworld News/MSP): ತುಳುವ ತಿಂಗಳ ಕಾರ್ತೆಲ್ ಮತ್ತು ಆಟಿ ತಿಂಗಳು ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ಭತ್ತದ ನಾಟಿ ಕೃಷಿಯ ಸಮಯ. ಹಿಂದಿನ ಕಾಲದಲ್ಲಿ ಕೃಷಿ ಯ ಕೆಲಸ ಎಂದರೆ ಜಾತ್ರೆಯ ಸಂಭ್ರಮ. ಭತ್ತದ ಕೃಷಿಯೇ ಜೀವನ, ಜೀವಾಳ ಎಂದು ನಂಬಿರುವ ತುಳುವ ನಾಡಿನ ಪ್ರತಿ ಕೃಷಿಕನೂ ಗದ್ದೆಗಳಲ್ಲಿ ಉಳುಮೆ ಮಾಡಿ ನೇಜಿ ನೆಡುವ ಕಾರ್ಯವನ್ನು ಶೃದ್ದೆಯಿಂದ ಮಾಡುತ್ತಿದ್ದರು. ಆದರೆ ಕಾಲ ಕಳೆದಂತೆ ಕೃಷಿಗೆ ಜನರ ಕೊರತೆ ಎದುರಾಗಿ ತಾಂತ್ರಿಕವಾಗಿ ಕೃಷಿ ಮಾಡಲಾರಂಭಿಸಿದರು.
ಆದರೂ ಕೂಡಾ ಕೂಲಿಯಾಳುಗಳ ಕೊರತೆ, ವಾಣಿಜ್ಯ ಬೆಳೆಗಳ ಭರಾಟೆಯಿಂದ ಭತ್ತದ ಕೃಷಿಯೇ ನಿಂತು ಹೋಗುವ ಹಂತದಲ್ಲಿ ನಾವಿದ್ದೇವೆ. ಈ ಕಾಲಘಟ್ಟದಲ್ಲಿ ಮತ್ತೆ ಕೃಷಿ ಪದ್ದತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಂಗಳೂರು ಕೆನರಾ ಕಾಲೇಜು ತುಳು ಸಂಘ ಪ್ರಯತ್ನ ಮಾಡಿ, ವಿದ್ಯಾರ್ಥಿಗಳೂ ಕೂಡಾ ಕೃಷಿ ಚಟುವಟಿಕೆಯ ಅನುಭವ ಪಡೆಯುವಂತೆ ಮಾಡಿದರು.
ಮಂಗಳೂರು ಕೆನರಾ ಕಾಲೇಜಿನ ಸುಮಾರು ನಲ್ವತ್ತುಕ್ಕೂ ಅಧಿಕ ವಿದ್ಯಾರ್ಥಿಗಳು ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಆಲಾಡಿ ನಿವಾಸಿ ಉದ್ಯಮಿ ಮಹಾಬಲ ಕೊಟ್ಟಾರಿ ಅವರ ಗದ್ದೆಗೆ ಬಂದು ಆರಂಭದಲ್ಲಿ ನೇಜಿ ತೆಗೆದು ಬಳಿಕ ಟಿಲ್ಲರ್ ಮೂಲಕ ಗದ್ದೆ ಉಳುಮೆ ಮಾಡಿದರು. ಉಳುಮೆ ಮಾಡಿ ಹದ ಮಾಡಿದ ಗದ್ದೆಯಲ್ಲಿ ನೇಜಿ ನೆಟ್ಟು ಕೃಷಿ ಪರಂಪರೆಯ ಅರ್ಥವನ್ನು ಸವಿದರು . ನೇಜಿ ನೆಡುವ ಸಂದರ್ಭದಲ್ಲಿ ತುಳು ಸಂಸ್ಕೃತಿಯ ಅಂಗವಾದ ಪಾಡ್ದನ ಹಾಡಿ ಕೆಸರುಗದ್ದೆಯಲ್ಲಿ ಆಟವಾಡಿ ಆನಂದ ಅನುಭವಿಸಿದರು.
ಈ ಸಂದರ್ಭ ಮಾತನಾಡಿದ ಗದ್ದೆಯ ಮಾಲೀಕ, ಮಹಾಬಲ ಕೊಟ್ಟಾರಿ " ಜೀವನಕ್ಕೆ ಶಾಲಾ ಕಾಲೇಜಿನಲ್ಲಿ ಕಲಿಯುವ ಪಾಠ ಮಾತ್ರ ಸಾಲದು ಇಂತಹ ಕಾರ್ಯಕ್ರಮ ಗಳು ಮಕ್ಕಳ ಬೆಳವಣಿಗೆ ದಾರಿ ದೀಪವಾಗಲಿದೆ. ಕೃಷಿ ಸಂಸ್ಕೃತಿಯ ನಾಡಿನಲ್ಲಿ ಜೀವನ ಮಾಡುವ ಪ್ರತಿಯೊಬ್ಬ ನಾಗರಿಕನಿಗೂ ಕೃಷಿಯ ಬಗ್ಗೆ ಆಸಕ್ತಿ ಮತ್ತು ಮಾಹಿತಿ ಬೇಕಾಗಿದೆ, ಆ ನಿಟ್ಟಿನಲ್ಲಿ ಕೆನರಾ ಕಾಲೇಜಿನ ತುಳು ಸಂಘ ಉತ್ತಮ ಕೆಲಸ ಮಾಡಿದೆ . ಇಂತಹ ತುಳು ಸಂಸ್ಕೃತಿಯ ಸತ್ವವನ್ನು ವಿದ್ಯಾರ್ಥಿಗಳಿಗೆ ನೆನಪಿಸುವ ಕೆಲಸ ಮಾಡುವ ಇಂತಹ ಮನಸ್ಸುಗಳಿಂದ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದರು.