ಮಂಗಳೂರು, ಜು 22 (Daijiworld News/MSP): ಕಳೆದೆರಡು ದಿನಗಳಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆಗೋಡೆ ಕುಸಿತ ಹಾಗೂ ಭೂ ಕುಸಿತ ಸಂಭವಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಈ ವಿಚಾರ ನಂಬಲಾರ್ಹವಲ್ಲ ಎಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ಭಾರೀ ಮಳೆಯ ಪರಿಣಾಮ ವಿಮಾನ ನಿಲ್ದಾಣದ ತಡೆಗೋಡೆ ಹಾಗೂ ಭೂಕುಸಿತಗೊಂಡು ವಿಮಾನ ಹಾರಾಟ ರದ್ದುಗೊಂಡಿದೆ ಎಂದು ಸುದ್ದಿ ಹರಿದಾಡುತ್ತಿದ್ದು, ವಿಮಾನ ನಿಲ್ದಾಣದಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ. ವಿಮಾನಗಳು ಎಂದಿನಂತೆ ಹಾರಾಟ ನಡೆಸುತ್ತಿದ್ದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಪರಿಪೂರ್ಣ ಕಾರ್ಯಾಚರಣೆಯ ಸ್ಥಿತಿಯಲ್ಲಿದೆ. ಕಳೆದ ವರ್ಷ ನಡೆದ ಘಟನೆಯನ್ನು ವೈಭವೀಕರಿಸಿ ಈ ವರ್ಷ ನಡೆದ ಘಟನೆಯಂತೆ ಸುದ್ದಿಯಲ್ಲಿ ಬಿಂಬಿಸಲಾಗಿದೆ. ಈ ಬಗ್ಗೆ ಸುಳ್ಳು ಮಾಹಿತಿಗಳನ್ನು ಬಿತ್ತರಿಸಲಾಗುತ್ತಿದೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬೇಡಿ. ಇಂತಹ ತಪ್ಪು ಸಂದೇಶಗಳನ್ನು ನಂಬಬೇಡಿ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಕಚೇರಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಳೆದ ವರ್ಷ ಮೇ 29ರಂದು ಮಂಗಳೂರಿನಾದ್ಯಂತ ಸುರಿದಿದ್ದ ಭಾರೀ ಮಳೆ ಪರಿಣಾಮ ಕೆಂಜಾರಿನ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇ ತಡೆಗೊಡೆ ಬಳಿ ಭೂಕುಸಿತವಾಗಿತ್ತು.