ಕಾಸರಗೋಡು, ಜು 22 (Daijiworld News/RD): ಶನಿವಾರ ಸುರಿದ ಭಾರೀ ಮಳೆ ಸೋಮವಾರವು ಮುಂದುವರಿದ ಹಿನ್ನಲೆಯಲ್ಲಿ ಕಾಸರಗೋಡು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಇಂದು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ರಜೆ ಘೋಷಣೆಸಿದ್ದಾರೆ.
ಈಗಾಗಲೇ ಮಳೆಯಿಂದ ತತ್ತರಗೊಂಡ ಕಾಸರಗೋಡು ಜಿಲ್ಲೆ, ಮಧುವಾಹಿನಿ ಹೊಳೆ ಉಕ್ಕಿ ಹರಿಯುತ್ತಿರುವುದರಿಂದ ಕಡಲ ತೀರದ ಜನರು ಆತಂಕ ಸ್ಥಿತಿ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಕಾಸರಗೋಡು ಚೇರಂಗೈಯಲ್ಲಿ ಕಡಲ್ಕೊರೆತದಿಂದಾಗಿ ರಸ್ತೆಗಳು ಕೊಚ್ಚಿ ಹೋದ ಘಟನೆ ನಡೆದಿದೆ. ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಯ ಪರಿಣಾಮವಾಗಿ ಕಿನಾನೂರಿನಲ್ಲಿ ನಾಲ್ಕು ಮನೆಗಳಿಗೆ ನೀರು ನುಗ್ಗಿದ್ದು, ಹಾಗೂ ತಗ್ಗು ಪ್ರದೇಶದ ನೆರೆಹೊರೆ ಮನೆಗಳಿಗೂ ನೀರು ನುಗ್ಗಿದ್ದು ಕುಟುಂಬದವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ನೀಲೇಶ್ವರ ರೈಲ್ವೆ ನಿಲ್ದಾಣದ ಪಾರ್ಕಿಂಗ್ ನೊಳಗೆ ನೀರು ನುಗ್ಗಿದ ಪರಿಣಾಮ ಹಲವು ವಾಹನಗಳು ನೀರಿನಲ್ಲಿ ಮುಳುಗಿದ ಘಟನೆ ಮೊನ್ನೆ ನಡೆಯಿತು.
ಈಗಾಗಲೇ ರಾಜ್ಯ ದುರಂತ ನಿವಾರಣೆ ಪ್ರಾಧಿಕಾರ ಮುಂದಿನ ದಿನಗಳಲ್ಲೂ ಬಿರುಸಿನ ಮಳೆಯಾಗುವ ಸಾಧ್ಯತೆಗಳಿದ್ದು, ನೆರೆ ಸಹಿತ ಪ್ರಕೃತಿ ವಿಕೋಪಗಳು ತಲೆದೋರುವ ಭೀತಿಯಿದೆ. ಸಂಬಂಧಪಟ್ಟ ಇಲಾಖೆಗಳು ಸಿದ್ಧತೆ ನಡೆಸುವಂತೆ, ತಾಲೂಕು ಮಟ್ಟದಲ್ಲಿ ನಿಯಂತ್ರಣ ಕೊಠಡಿ ಆರಂಭಿಸುವಂತೆ ಆದೇಶ ನೀಡಿದ, ಬೆನ್ನಲ್ಲೇ ವಿಪರೀತ ಮಳೆ ಈ ಭಾಗದಲ್ಲಿ ಸುರಿಯುತ್ತಿದೆ.
ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಒಂದು ಮನೆ ಪೂರ್ಣ ರೂಪದಲ್ಲಿ, 70 ಮನೆಗಳು ಭಾಗಶಃ ಹಾನಿಗೀಡಾಗಿದ್ದು, 60 ಹೆಕ್ಟೇರ್ ಕೃಷಿ ಹಾನಿಗೊಂಡಿರುತ್ತದೆ.