ಮಂಗಳೂರು, ಜು21(Daijiworld News/SS): ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಡೆಂಗ್ಯೂ ರೋಗ ನಿಯಂತ್ರಣಕ್ಕಾಗಿ ಇಂದು ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಬೃಹತ್ ಆಂದೋಲನ ನಡೆಯಿತು.
ಡೆಂಗ್ಯೂ ವ್ಯಾಪಕವಾಗಿ ಕಂಡು ಬಂದಿರುವ ಗುಜ್ಜರಕೆರೆ, ಬೋಳಾರ, ಎಮ್ಮೆಕೆರೆ, ಮಹಾಕಾಲಿಪಡ್ಪು, ಮಂಗಳಾದೇವಿ ಈ. ಪ್ರದೇಶಗಳನ್ನು ಗ್ರಿಡ್ 1 ಎಂದು ಪರಿಗಣಿಸಿದ್ದು, ವ್ಯವಸ್ಥಿತವಾಗಿ ಇಂದು ಈ ಪ್ರದೇಶಗಳಲ್ಲಿ ತೀವ್ರ ಪರಿಶೀಲನೆ, ತಪಾಸಣಾ ಚಟುವಟಿಕೆ ನಡೆಸಿದ್ದಾರೆ.
ಮಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಉಲ್ಬಣಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ಹರಡಲು ಕಾರಣರಾಗುವವರ ವಿರುದ್ಧ ಕಠಿಣ ಕ್ರಮಕ್ಕೆ ಮಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಕೆಲ ಪ್ರದೇಶಗಳ ಮನೆ, ಉದ್ದಿಮೆ, ಅಂಗಡಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದು. ರೋಗ ನಿಯಂತ್ರಣ, ಸೊಳ್ಳೆ ಉತ್ಪತ್ತಿ ತಾಣಗಳಿಗೆ ಅವಕಾಶ ನೀಡದಂತೆ ಜಾಗೃತಿ ಮೂಡಿಸಿದ್ದಾರೆ. ಜೊತೆಗೆ ಹಲವು ದಿನಗಳಿಂದ ನೀರು ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣವಾದವರಿಗೆ ಸ್ಥಳದಲ್ಲೇ ದಂಡ ವಿಧಿಸಿದ್ದಾರೆ.
ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಈ ಎಲ್ಲಾ ಚಟುವಟಿಕೆಗಳ ಮೇಲುಸ್ತುವಾರಿ ವಹಿಸಿದ್ದು, ಪ್ರತೀ ದಿನ ಸಂಜೆ 7 ಗಂಟೆಗೆ ಈ ಸಂಬಂಧ ಸಭೆ ನಡೆಸಿ, ಪರಿಶೀಲನೆ ನಡೆಸುತ್ತಿದ್ದಾರೆ. ಈವರೆಗೆ ಒಟ್ಟು ರೂ. 85 ಸಾವಿರ ದಂಡ ಸಂಗ್ರಹಿಸಲಾಗಿದೆ. ಈ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ಆಂದೋಲನದಲ್ಲಿ ಸುಮಾರು 250ಕ್ಕೂ ಅಧಿಕ ಸಿಬ್ಬಂದಿಗಳು, ಸ್ವಯಂ ಸೇವಕರು, ಅಧಿಕಾರಿಗಳು ಭಾಗವಹಿಸಿದ್ದರು.