ಕಾರ್ಕಳ, ಡಿ 14: ಜೀವನದಲ್ಲಿ ಒಳ್ಳೆಯ ಗುಣಗಳನ್ನು ಅಳವಡಿಸುವುದರಿಂದ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯವಿದೆ ಎಂದು ಎಎಸ್ಪಿ ಋಷಿಕೇಶ್ ಭೂಷಣ್ ಹೇಳಿದರು.
ಉಡುಪಿ ಜಿಲ್ಲಾ ಪೊಲೀಸ್, ಕಾರ್ಕಳ ಉಪ ವಿಭಾಗ, ಕಾರ್ಕಳ ವೃತ್ತ, ಕಾರ್ಕಳ ನಗರ ಪೊಲೀಸ್ ಠಾಣೆ ಸಹಯೋಗದೊಂದಿಗೆ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಜರುಗಿದ ಅಪರಾಧ ತಡೆಯುವಲ್ಲಿ ಸಾರ್ವಜನಿಕರ ಪಾತ್ರ ಇದರ ಕುರಿತು ಮಾಹಿತಿ ನೀಡಿ ಮಾತನಾಡಿದರು.
ಮನೆಗೆ ಬೀಗ ಹಾಕಿ ಮನೆಯಿಂದ ಹೊರಹೋಗುವ ಸಮಯದಲ್ಲಿ ನೆರೆ-ಕರೆಯವರಿಗೆ ಮತ್ತು ಪೊಲೀಸರಿಗೆ ಮಾಹಿತಿ ತಿಳಿಸಬೇಕು. ಸರಗಳ್ಳರ ಬಗ್ಗೆ ಎಚ್ಚರವಹಿಸಬೇಕು. ಅಭರಣಗಳನ್ನು ಸಾಧ್ಯವಾದಷ್ಟು ಮಟ್ಟಗೆ ಲಾಕರ್ನಲ್ಲಿ ಇಡುವುದು ಸೂಕ್ತ. ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸುವುದು. ಕಡ್ಡಾಯವಾಗಿ ಹೆಮ್ಲೇಟನ್ನು ಧರಿಸಿ ವಾಹನ ಚಾಲನೆ ಮಾಡುವುದು. ವಾಹನ ಚಲಾಯಿಸುವಾಗ ಮೊಬೈಲ್ ಬಳಸಬಾರದು. ಯಾವುದೇ ಅನಾಮಧೇಯ ಕರೆಗಳಿಗೆ ಸ್ಪಂದಿಸುವಾಗ ವೈಯಕ್ತಕ ವಿವರಗಳಾಗಲಿ, ಎಪಿಎಂ ನಂಬ್ರ,ಪಿನ್ ಮತ್ತು ಓಟಿಪಿ ನಂಬ್ರಗಳನ್ನು ತಿಳಿಸಬಾರದು. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು. ಯಾವುದೇ ಅಪರಿಚಿತ ವ್ಯಕ್ತಿಗಳನ್ನು ಮನೆಯೊಳಗೆ ಸೇರಿಸಬಾರದು. ವಿದ್ಯಾರ್ಥಿಗಳು ತಮ್ಮ ಸಮಸ್ಸೆಯನ್ನು ಶಿಕ್ಷಕರಲ್ಲಿ ಹಾಗೂ ಪೋಷಕರಲ್ಲಿ ಹಂಚಿಕೊಳ್ಳಬೇಕು. ಸಾರ್ವಜನಿಕರು ತಮ್ಮ ದೂರನ್ನು ಯಾವುದೇ ಭಯ ಆತಂಕ ಇಲ್ಲದೇ ಪೊಲೀಸರಿಗೆ ತಿಳಿಸಬೇಕು. ಒಂಟಿ ಮನೆಯಲ್ಲಿ ವಾಸಿಸುವ ವೃದ್ಧರು ಪೊಲೀಸರ ಸಂಪರ್ಕದಲ್ಲಿರಬೇಕು. ಯುವಕ, ಯುವತಿಯರು ಫೇಸ್ಬುಕ್ ಮತ್ತು ವಾಟ್ಸಾಪ್ನ್ನು ಬಳಸುವಾಗ ಎಚ್ಚರ ಮತ್ತು ಯಾವುದೇ ಧರ್ಮವನ್ನು ನಿಂದಿಸುವಂತಹ ಸಂದೇಶಗಳನ್ನು ಸ್ವೀಕರಿಸಬಾರದು ಮತ್ತು ಕಳುಹಿಸಬಾರದು. ಮಹಿಳೆಯರು ಒಬ್ಬಂಟಿಯಾಗಿ ಚಿನ್ನಾಭರಣಗಳನ್ನು ಧರಿಸಿ ನಿರ್ಜನ ಪ್ರದೇಶದಲ್ಲಿ ಓಡಾಡಬಾರದು ಯಾವುದೇ ಅಪರಾಧ, ಅಪಘಾತವಾದಾಗ ತುರ್ತಾಗಿ ಪೊಲೀಸರಿಗೆ -100 ಅಥವಾ ಅಂಬುಲೆನ್ಸ್-108 ಕ್ಕೆ ತುರ್ತು ಕರೆ ಮಾಡಬೇಕು. ದೇವಸ್ಥಾನ, ಕಚೇರಿ, ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿ, ಸಿಸಿ ಕ್ಯಾಮರ ಮತ್ತು ಸ್ಥರನ್ ಅಳವಡಿಸುವುದು ಸೂಕ್ತವಾಗಿದೆ. ಮನೆ ಕೆಲಸದವರ, ಸಂಸ್ಥೆಯಲ್ಲಿ ದುಡಿಯುವವರ ಪೂರ್ವ ಚರಿತ್ರೆ ಮತ್ತು ವಿಳಾಸವನ್ನು ದಾಖಲಿಸಿಕೊಳ್ಳುವುದು ಸೂಕ್ತ. ಮನೆ ಬಾಡಿಗೆ ನೀಡುವಾಗ ಬಾಡಿಗೆ ಕಾರರು ಪತ್ರ ದಾಖಲಿಸುವುದು, ಬಾಡಿಗೆ ಮನೆಯಲ್ಲಿ ವಾಸವಾಗಿರವವರ ಭಾವಚಿತ್ರಗಳನ್ನು ಸಂಗ್ರಹಿಸುವುದು ಹಾಗೂ ಅದರ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೂ ಮಾಹಿತಿ ನೀಡಬೇಕು ಎಂದರು.
ಪೊಲೀಸ್ ವೃತ್ತ ನಿರೀಕ್ಷಕ ಜಾಯ್ ಅಂತೋನಿ, ನಗರ ಠಾಣಾಧಿಕಾರಿ ನಂಜ ನಾಯಕ್, ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪಾಂಶ್ರುಪಾಲ ಎಂ. ಶ್ರೀ ವರ್ಮ ಅಜ್ರಿ, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.