ಮಂಗಳೂರು, ಜು21(Daijiworld News/SS): ಮಂಗಳೂರಿನಲ್ಲಿ ಡೆಂಗ್ಯೂ ಮತ್ತೆ ಸದ್ದು ಮಾಡುತ್ತಿದೆ. ಮಳೆ ಹಾಗೂ ಬಿಸಿಲಿನಿಂದ ಹವಾಮಾನದಲ್ಲಾಗುವ ವೈಪರಿತ್ಯಗಳಿಂದ ಸೊಳ್ಳೆಯ ಮೂಲಕ ಡೆಂಗ್ಯೂನಂತಹ ರೋಗ ಕಾಣಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ, ಶಾಲಾ-ಕಾಲೇಜುಗಳ ಕಟ್ಟಡಗಳ ತಾರಸಿ, ಮೇಲ್ಚಾವಣಿಯಲ್ಲಿ ಹಾಗೂ ಶಾಲಾ ಕಟ್ಟಡದ ಸುತ್ತಮುತ್ತ ನೀರು ನಿಲ್ಲದಂತೆ ಗಮನಹರಿಸಬೇಕು ಎಂದು ನಗರಪಾಲಿಕೆ ಜಂಟಿ ಆಯುಕ್ತೆ ಗಾಯತ್ರಿ ನಾಯಕ್ ಸೂಚಿಸಿದ್ದಾರೆ.
ಸಾಂಕ್ರಮಿಕ ರೋಗಗಳ ನಿಯಂತ್ರಣ ಕುರಿತು ಜನಜಾಗೃತಿ ಉಪ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲಾ ಕಟ್ಟಡಗಳ ಮೂಲೆ ಮೂಲೆಗಳನ್ನು ಪರಿಶೀಲನೆ ನಡೆಸಬೇಕು. ಆಯಾ ಶಾಲಾ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ಶಾಲಾ ಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿಗಳನ್ನು ಈ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳ ಆವರಣದಲ್ಲಿ ಹಾಗೂ ಕಟ್ಟಡ ಆವರಣದಲ್ಲಿ ಸಾಂಕ್ರಾಮಿಕ ರೋಗಗಳಿಗೆ ಕಾರಣ ಆಗುವ ಯಾವುದೇ ರೀತಿಯ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು. ಸಂಪೂರ್ಣ ಸ್ವಚ್ಛತೆಗೊಳಿಸಲು ಅಭಿಯಾನ ನಡೆಸಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿರುವ ಎಲ್ಲಾ ಶಾಲಾ-ಕಾಲೇಜುಗಳ ಕಟ್ಟಡಗಳ ತಾರಸಿ, ಮೇಲ್ಚಾವಣಿಯಲ್ಲಿ ಹಾಗೂ ಶಾಲಾ ಕಟ್ಟಡದ ಸುತ್ತಮುತ್ತ ನೀರು ನಿಲ್ಲದಂತೆ ಗಮನಹರಿಸಬೇಕು. ಶಾಲಾ ಆಟದ ಮೈದಾನ, ನೀರಿನ ಟ್ಯಾಂಕ್, ಶೌಚಾಲಯ ಮತ್ತಿತರ ಸ್ಥಳಗಳಲ್ಲಿ ತಪಾಸಣೆ ನಡೆಸಿ ಮಲೇರಿಯಾ, ಡೆಂಗ್ಯೂ ರೋಗಗಳಿಗೆ ಕಾರಣವಾಗುವ ಯಾವುದೇ ರೀತಿಯ ಅಂಶಗಳು ಸೃಷ್ಟಿಯಾಗದಂತೆ ಹಾಗೂ ನೀರು ನಿಲ್ಲದಂತೆ ಗಮನಹರಿಸಬೇಕು. ಈ ಬಗ್ಗೆ ಪ್ರತಿನಿತ್ಯ ಜಿಲ್ಲಾಡಳಿತಕ್ಕೆ ವರದಿ ನೀಡಬೇಕು ಎಂದು ತಿಳಿಸಿದರು.
ಶಾಲೆಯಲ್ಲಿ ಪ್ರತಿನಿತ್ಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಾಂಕ್ರಮಿಕ ರೋಗಗಳ ನಿಯಂತ್ರಣ ಬಗ್ಗೆ ತಿಳಿವಳಿಕೆ ಹೇಳಬೇಕು. ಇದರ ಬಗ್ಗೆ ಜಾಗೃತಿ ಮೂಡಿಸುವ ಪೂರಕವಾದ ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶಿಸಬೇಕು. ಶಾಲಾ ಕಾಲೇಜುಗಳಲ್ಲಿರುವ ಎನ್ಎಸ್ಎಸ್, ಎನ್ಸಿಸಿ ತಂಡಗಳನ್ನು ಬಳಸಿಕೊಳ್ಳಬೇಕು. ಈ ಚಟುವಟಿಕೆಗಳನ್ನು ಮುಂದಿನ ಒಂದು ತಿಂಗಳಲ್ಲಿ ನಿರಂತರವಾಗಿ ನಡೆಸಬೇಕು ಎಂದು ಹೇಳಿದರು.