ಮಂಗಳೂರು, ಜು 19 (Daijiworld News/SM): ನಗರದ ಬೋಂದೆಲ್ ಸಂತ ಲಾರೆನ್ಸರ ಪುಣ್ಯಕ್ಷೇತ್ರದಲ್ಲಿ ಆಗಸ್ಟ್ 10ರಂದು ವಾರ್ಷಿಕ ಮಹೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಧರ್ಮಗುರುಗಳಾದ ವಂ. ಫಾ. ಆಂಡ್ರ್ಯು ಲಿಯೋ ಡಿಸೋಜ ತಿಳಿಸಿದ್ದಾರೆ.
ಇನ್ನು ಹಬ್ಬಕ್ಕೆ ಪೂರ್ವಭಾವಿಯಾಗಿ ನೊವೆನಾ ಪ್ರಾರ್ಥನೆಗಳು ಜರಗಲಿವೆ. ಹಬ್ಬದ ಸಂದರ್ಭ ಆಗಮಿಸುವ ಭಕ್ತರಿಗಾಗಿ ಅನ್ನಸಂತರ್ಪಣೆ ಆಯೋಜಿಸಲಾಗಿದ್ದು, ಇದರ ಅಂಗವಾಗಿ ಜುಲೈ 31ರಂದು ಸಂಜೆ 5 ಗಂಟೆಗೆ ಮೇರಿಹಿಲ್ ಮೌಂಟ್ ಕಾರ್ಮೆಲ್ ಶಾಲಾ ವಠಾರದಿಂದ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ.
ಇನ್ನು ಆಗಸ್ಟ್ 1ರಿಂದ 9ರ ತನಕ ನೊವೆನಾ ಪ್ರಾರ್ಥನೆಗಳು ನಡೆಯಲಿವೆ. ಆಗಸ್ಟ್ 1 ರಂದು ಬೆಳಗ್ಗೆ 10 ಗಂಟೆಗೆ ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ದಾಯ್ಜಿವರ್ಲ್ಡ್ ಸಮೂಹ ಸಂಸ್ಥೆಗಳ ಪ್ರಧಾನ ಸಂಪಾದಕ ವಾಲ್ಟರ್ ನಂದಳಿಕೆ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ನೊವೆನಾ ಪ್ರಾರ್ಥನೆಗಳು ಪ್ರತಿದಿನ ವಿವಿಧ ಕೋರಿಕೆಗಳೊಂದಿಗೆ ನೆರವೇರಲಿದೆ.
ಇನ್ನು ಹಬ್ಬದ ಪ್ರಧಾನ ಬಲಿ ಪೂಜೆ ಆಗಸ್ಟ್ 10 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದ್ದು, ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ. ಡಾ. ಪೀಟರ್ ಪಾವ್ಲ್ ಸಲ್ಡಾನಾ ನೆರವೇರಿಸಲಿದ್ದಾರೆ. ಅದೇ ದಿನ ಸಂಜೆ 6 ಗಂಟೆಗೆ ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಬಿಷಪ್ ವಂ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಬಲಿಪೂಜೆ ನೆರವೇರಿಸಲಿದ್ದಾರೆ.
ಕರ್ನಾಟಕ, ಕೇರಳ, ಗೋವಾ ಸೇರಿದಂತೆ ಹಲವು ಕಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯನ್ನು ಹೊಂದಲಾಗಿದೆ.