ಕಾಸರಗೋಡು, ಜು 19 (DaijiworldNews/SM): ಗುರುವಾರ ರಾತ್ರಿಯಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಡಿದೆ. ಹಲವೆಡೆ ನೆರೆ ನೀರು ನುಗ್ಗಿದ್ದು, ಅಪಾರ ಹಾನಿ ಉಂಟಾಗಿದೆ. ಮುಂದಿನ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುವ ಮುನ್ಸೂಚನೆ ಹಿನ್ನಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಜುಲೈ ೨೦ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ.
ಮುಂದಿನ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜಿಲ್ಲೆಯ ಹಲವೆಡೆ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಕುಟುಂಬದವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕಿನಾನೂರಿನಲ್ಲಿ ನಾಲ್ಕು ಮನೆಗಳಿಗೆ ನೀರು ನುಗ್ಗಿದೆ. ನೀಲೇಶ್ವರ ರೈಲ್ವೆ ನಿಲ್ದಾಣದ ಪಾರ್ಕಿಂಗ್ ನೊಳಗೆ ನೀರು ನುಗ್ಗಿದ ಪರಿಣಾಮ ಹಲವು ವಾಹನಗಳು ನೀರಿನಲ್ಲಿ ಮುಳುಗಿವೆ. ಮಧುವಾಹಿನಿ ಹೊಳೆ ಉಕ್ಕಿ ಹರಿಯುತ್ತಿರುವುದರಿಂದ ತೀರದ ಮನೆಯವರು ಆತಂಕದಲ್ಲಿದ್ದಾರೆ. ಇನ್ನು ಕಾಸರಗೋಡು ಚೇರಂಗೈಯಲ್ಲಿ ಕಡಲ್ಕೊರೆತ ಉಂಟಾಗಿದ್ದು, ತೀರದ ರಸ್ತೆ ಕೊಚ್ಚಿ ಹೋಗಿದೆ.
ಕುಂಬಳೆ ರೈಲ್ವೆ ನಿಲ್ದಾಣದೊಳಗೆ ನೀರು ನುಗ್ಗಿದ್ದು, ಮಳೆ ಬಿರುಸುಗೊಂಡಲ್ಲಿ ರೈಲ್ವೆ ಹಳಿ ಮುಳುಗಡೆಗೊಳ್ಳುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲೂ ಬಿರುಸಿನ ಮಳೆಯಾಗುವ ಸಾಧ್ಯತೆಗಳಿದ್ದು, ನೆರೆ ಸಹಿತ ಪ್ರಕೃತಿ ವಿಕೋಪಗಳು ತಲೆದೋರುವ ಭೀತಿಯಿದೆ. ಸಂಬಂಧಪಟ್ಟ ಇಲಾಖೆಗಳು ಸಿದ್ಧತೆ ನಡೆಸುವಂತೆ, ತಾಲೂಕು ಮಟ್ಟದಲ್ಲಿ ನಿಯಂತ್ರಣ ಕೊಠಡಿ ಆರಂಭಿಸುವಂತೆ ರಾಜ್ಯ ದುರಂತ ನಿವಾರಣೆ ಪ್ರಾಧಿಕಾರ ಆದೇಶ ನೀಡಿದೆ.
ಕಳೆದ ೨೪ ಗಂಟೆಗಳಿಂದ ಈ ವರೆಗೆ ಒಂದು ಮನೆ ಪೂರ್ಣ ರೂಪದಲ್ಲಿ, 70 ಮನೆಗಳು ಭಾಗಶಃ ಹಾನಿಗೀಡಾಗಿವೆ. 60 ಹೆಕ್ಟೇರ್ ಕೃಷಿ ಹಾನಿಗೊಂಡಿದೆ.