ಉಡುಪಿ, ಜು 19(Daijiworld News/MSP): ಶೀರೂರು ಮಠದ ಸ್ವಾಮೀಜಿಯವರ ಮರಣ ಸಹಜವಾದುದಲ್ಲ ಎನ್ನುವುದಕ್ಕೆ ಬಹಳಷ್ಟು ಪುರಾವೆಗಳಿವೆ. ಆದರೆ ಈ ಬಗ್ಗೆ ದೂರು ನೀಡಲು ಯಾರು ಮುಂದೆ ಬರದಿರುವುದು ಬೇಸರದ ಸಂಗತಿ ಎಂದು ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಖೇದ ವ್ಯಕ್ತಪಡಿಸಿದ್ದಾರೆ.
ಶ್ರೀ ಲಕ್ಮ್ಷೀವರ ತೀರ್ಥ ಸ್ವಾಮೀಜಿಗಳು ಕೀರ್ತಿಶೇಷರಾಗಿ ಒಂದು ವರ್ಷದ ನೆನಪಿಗಾಗಿ ಶ್ರೀ ಈಶ ವಿಠ್ಠಲ ದಾಸ ಸ್ವಾಮಿಗಳ ನೇತೃತ್ವದಲ್ಲಿ ಹಾಗೂ ಶೀರೂರು ಸ್ವಾಮಿಗಳ ಅಭಿಮಾನಿಗಳು ಸೇರಿಕೊಂಡು, ಉಪ್ಪೂರಿನಲ್ಲಿರುವ ಸ್ಪಂದನ ವಿಶೇಷ ಮಕ್ಕಳ ಶಾಲೆಯಲ್ಲಿ ಆಯೋಜಿಸಿದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
" ಶೀರೂರು ಸ್ವಾಮೀಜಿಗಳ ದೇಹದಲ್ಲಿ ಮಣಿಪಾಲದ ವೈದ್ಯರೇ ವಿಷದ ಅಂಶ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಈ ಮಾತನ್ನು ವೈದ್ಯರು ವಿಷ ವಿಜ್ಞಾನದ ವರದಿ ಪ್ರಕಾರ ಮತ್ತು ಮರಣೋತ್ತರ ಪರೀಕ್ಷೆಯ ಪ್ರಕಾರ ಹೇಳಿದ್ದಾರೆ. ವಿಷವಿಜ್ಞಾನ ತಜ್ಞರ ವರದಿಯ ಪ್ರಕಾರ ರಕ್ತ, ಉದರ ಮತ್ತು ಮೂತ್ರದಲ್ಲಿ ವಿಷದ ಅಂಶ ಪತ್ತೆಯಾಗಿದೆ. ಉದರಾಂಗಗಳನ್ನು ಸ್ಥಳೀಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವಾಗ ಹನ್ನೊಂದು ದಿನ ವಿಳಂಬವಾಗಿತ್ತು. ಅಲ್ಲದೆ ಪರೀಕ್ಷೆ ನಡೆಸುವಾಗ ಮತ್ತಷ್ಟು ಸಮಯ ತೆಗೆದುಕೊಳ್ಳಲಾಗಿದೆ ಇಷ್ಟಾಗಿಯೂ ಈ ವಿಚಾರ ಮುಂದಿಟ್ಟು ಕೋರ್ಟ್ನಲ್ಲಿ ನ್ಯಾಯ ಒದಗಿಸಲು, ಶ್ರೀಗಳ ಒಬ್ಬನೇ ಒಬ್ಬ ಸಂಬಂಧಿಕ ದೂರು ನೀಡಲು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಎ.ಸಿ ಕುಂದಾಪುರ ನ್ಯಾಯಲಯದಲ್ಲಿ ನಡೆಯುವ ಈ ಕೇಸು ಇನ್ನೂ ಕೂಡ ತೆರೆಯಲು ಅವಕಾಶ ಇದೆ. ಯಾವುದೆ ಕೊಲೆ ಅಥವಾ ಸಂಶಯಾಶ್ಪದ ಮರಣವಾಗಿದ್ದಲ್ಲಿ ಅದನ್ನು ಮತ್ತೆ ತೆರೆಯಲು ಅವಕಾಶವಿದೆ. ಮಣಿಪಾಲದ ಕೆಎಮ್ ಸಿ ಆಸ್ಪತ್ರೆಯಲ್ಲಿ ನಡೆದ ಮರಣೋತ್ರರ ಪರೀಕ್ಷಯ ವರದಿ ಮತ್ತು ವಿಧಿ ವಿಜ್ಞಾನ ವರದಿ ಎರಡನ್ನ ಒಟ್ಟು ಗೂಡಿಸಿದ ಸಮಗ್ರ ವರದಿ( report-blood tested positive for organoprosporous urine sample tested for benzodiazepine)ಯನ್ನು ನ್ಯಾಯಲಯಕ್ಕೆ ಸಲ್ಲಿಸಲಾಗಿದ್ದರೂ ವಯೋ ಸಹಜ ಸಾವು ಎಂದು ತೀರ್ಪು ಬಂದಿದ್ದು ಒಪ್ಪತಕ್ಕದ್ದಲ್ಲ. ಇನ್ನೂ ಕೂಡ ಉಚ್ಚ ನ್ಯಾಯಾಲಯಲ್ಲಿ ರಿಟ್ ಪಿಟಿಷನ್ ಹಾಕುವ ಅವಕಾಶವಿದೆ. ಶ್ರೀಗಳ ಅಸಹಜ ಸಾವಿಗೆ ನ್ಯಾಯ ಸಿಗಲೇ ಬೇಕು. ಸ್ವಾಮೀಜಿಯ ಸುತ್ತಮುತ್ತ ಇದ್ದ ವಿರೋದ ಅಂಶಗಳನ್ನು ತೆಗೆದು ಕೊಳ್ಳಬೇಕು. ನ್ಯಾಯ ಪಡೆಯಲು ಎಲ್ಲಾ ದಿಕ್ಕಿನಿಂದ ಆಲೋಚನೆ ಮಾಡುವ ಅನಿವಾರ್ಯತೆ ಇದೆ ಎಂದು ವಕೀಲ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೇಮಾರು ಸ್ವಾಮೀಜಿಗಳು, ' ಶೀರೂರು ಸ್ವಾಮೀಜಿಗೆ ಅನ್ಯಾಯವಾಗಿದೆ, ಇಡೀ ಜಗತ್ತು ಅವರ ವಿರುದ್ದ ನಿಂತರೂ ನಾನು ಮಾತ್ರ ಸದಾ ಸ್ವಾಮೀಜಿಯ ಪರ ನಿಲ್ಲುತ್ತೇನೆ. ನನ್ನಲ್ಲಿ ಬಲವಾದ ಸಾಕಷ್ಟು ಸಾಕ್ಷಿಗಳು ಆಡಿಯೋ ರೆಕಾರ್ಡ್ ಎಲ್ಲವೂ ಇದೆ. ಕಾಲ ಬಂದಾಗ ಎಲ್ಲವನ್ನು ಬಯಲಿಗೆ ಎಳೆಯುತ್ತೇನೆ. ಅದು ಯಾರೇ ಆಗಿರಲಿ ಸ್ವಾಮೀಜಿಯ ಜೀವಕ್ಕೆ ಕೇಡು ಬಯಸಿದ್ದವರಿಗೆ ಶಿಕ್ಷೆ ಖಂಡಿತಾ ಆಗುತ್ತೆ. ಪತ್ರಕರ್ತರೊಬ್ಬರು ಶ್ರೀಗಳ ಆತ್ಮ ಚರಿತ್ರೆ ಬರೆಯುತ್ತಿದ್ದು, ಇದರಲ್ಲಿ ಶ್ರೀಗಳು ಕಂಡ ಮಾಫಿಯಾ, ಮುಖವಾಡ, ಮಾಡಿದ ದಾನ-ಧರ್ಮ ಸಹಾಯ ವಿಚಾರಗಳು ಒಳಗೊಂಡಿವೆ ಎಂದರು.
ಈ ಸಂದರ್ಭದಲ್ಲಿ, ಸಾಯಿರಾಧ ಡೆವಲಪರ್ ನ ಮ್ಯಾನೇಜಿಂಗ್ ಡೈರೆಕ್ಟರ್ ಮನೋಹರ್ ಶೆಟ್ಟಿ, ಬಡಗುಬೆಟ್ಟು ಕ್ರೆಡಿಟ್ ಕೋಪರೇಟಿವ್ ನ ಜನರಲ್ ಮ್ಯಾನೇಜರ್ ಜಯಕರ್ ಶೇಟ್ಟಿ ಇಂದ್ರಾಳಿ, ಏಸ್ ಸಂಸ್ಥೆಯ ನಿರ್ದೇಶಕರಾದ ಲತಾವ್ಯ ಆಚಾರ್ಯ ಶ್ರೀಕಾಂತ್ ಶೆಟ್ಟಿ, ಸ್ಪಂಧನ ಶಾಲೆಯ ಮುಖ್ಯಸ್ಥರಾದ ಜನಾರ್ಧನ, ನವೀನ್ ರಾವ್, ರಾಧಾ ಕೃಷ್ಣ ಶೆಟ್ಟಿ, ಸಂತೋಷ್, ಭಾಸ್ಕರ್ ಮತ್ತಿರರು ಉಪಸ್ಥಿತರಿದ್ದರು.