ಮಂಗಳೂರು,ಜು 19(Daijiworld News/MSP): ಜಿಲ್ಲೆಯಲ್ಲಿ, ವಿಶೇಷವಾಗಿ ನಗರ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಮಾದಕ ವಸ್ತು ಜಾಲವನ್ನು ಸಂಪೂರ್ಣವಾಗಿ ಮಟ್ಟಹಾಕಲು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಶಾಲಾ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ಪೋಷಕರ ಬೆಂಬಲ ಕೋರಿದ್ದಾರೆ.
ಈ ಬಗ್ಗೆ ಸಂದೀಪ್ ಪಾಟೀಲ್ ಸಾರ್ವಜನಿಕರಿಗೆ ಸಂದೇಶ ರವಾನಿಸಿದ್ದು, " ಮಂಗಳೂರು ನಗರ ಪೊಲೀಸರು ಮಾದಕ ವಸ್ತು ಮಾರಾಟ ಜಾಲವನ್ನು ಮಟ್ಟ ಹಾಕುವುದನ್ನು ಪ್ರಮುಖ ಆದ್ಯತೆಯಾಗಿ ಪರಿಗಣಿಸಿದ್ದು. ಇದೇ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮಾದಕ ವಸ್ತುಗಳ ಸಾಗಣೆ, ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ ಅಂತಹ ಆರೋಪಿಗಳನ್ನು ವಶಪಡಿಸಿಕೊಳ್ಳುತ್ತಿದ್ದೇವೆ ಮಾತ್ರವಲ್ಲದೆ ಮಾದಕ ವಸ್ತುಗಳ ಸೇವನೆಯೂ ಅಪರಾಧವಾಗಿದ್ದು ಇಂತಹ ವ್ಯಸನಿಗಳನ್ನು ಬಂಧಿಸುತ್ತಿದ್ದೇವೆ.
ನಮ್ಮ ಈ ಕಾರ್ಯಾಚರಣೆಯಲ್ಲಿ ಮಾದಕ ದ್ರವ್ಯಗಳ ದಂಧೆಯಲ್ಲಿ ಪ್ರಮುಖವಾಗಿ 18 ರಿಂದ 24 ವಯೋಮಿತಿಯ ಯುವಕರು, ವಿಶೇಷವಾಗಿ ನಗರದ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾಗಿರುವುದು ಪ್ರಮುಖವಾಗಿ ಗಮನಕ್ಕೆ ಬಂದಿದೆ. ಹೀಗಾಗಿ ಮಾದಕವಸ್ತು ದಂಧೆಯನ್ನು ಬೇರು ಸಮೇತ ಕಿತ್ತು ಹಾಕಲು ಪೊಲೀಸ್ ಇಲಾಖೆ ಶಾಲಾ - ಕಾಲೇಜುಗಳ ಅಧಿಕಾರಿಗಳ ಮತ್ತು ವಿದ್ಯಾರ್ಥಿಗಳ ಪೋಷಕರ ಬೆಂಬಲ ಬೇಕಾಗುತ್ತದೆ.
ಮಾದಕ ವಸ್ತುವಿನ ಸೇವನೆ ಮಾರಾಟದಂತ ಯಾವುದೇ ಅನುಮಾನ , ಅನುಮಾನಸ್ಪದ ಅಂಶ ಕಂಡುಬಂದರೆ ತಕ್ಷಣ ಪೊಲೀಸ್ ಇಲಾಖೆ ಮಾಹಿತಿ ರವಾನಿಸಿದರೆ ಮುಂದಿನ ಕ್ರಮವನ್ನು ಪೊಲೀಸ್ ಇಲಾಖೆ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.
ಮಾತ್ರವಲ್ಲದೆ, " ಪೋಷಕರು ಹಾಗೂ ಶಾಲಾ ಅಧಿಕಾರಿಗಳು ಮಾದಕ ವಸ್ತು ಏನೆಂಬುದು ಅರ್ಥಮಾಡಿಕೊಳ್ಳಬೇಕಾಗಿದೆ. ನಗರದಲ್ಲಿ ಹೆಚ್ಚು ಬಳಕೆಯಲ್ಲಿರುವ ಡ್ರಗ್ಸ್ ಅಂದರೆ ಕೊಕೇನ್ ಮತ್ತು ಎಂಡಿಎಂ. ಇವು ಉಪ್ಪು ಅಥವಾ ಸಕ್ಕರೆ ಪುಡಿಯಂತೆ ಕಾಣುವ ಬಿಳಿ ಪುಡಿಗಳಾಗಿವೆ. ಅಂತಹ ಬಿಳಿ ಪುಡಿಗಳನ್ನು ಹೊಂದಿರುವ ಯಾವುದೇ ವಿದ್ಯಾರ್ಥಿಯನ್ನು ಅವರು ಕಂಡುಕೊಂಡರೆ, ತಕ್ಷಣ ನಮ್ಮ ಗಮನಕ್ಕೆ ತರಬೇಕು"
ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರವಿದ್ದರೆ ಜಿಲ್ಲೆ ಹಾಗೂ ನಗರದಲ್ಲಿ ಚಾಚಿರುವ ಮಾದಕ ದ್ರವ್ಯಗಳ ಕರಾಳಹಸ್ತವನ್ನು ಸಂಪೂರ್ಣವಾಗಿ ಮಟ್ಟಹಾಕಬಹುದಾಗಿದೆ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.