ಉಡುಪಿ ಡಿ 14 : ಕೋಡಿ ಬೆಂಗ್ರೆ ಬಳಿಯ ಮಲ್ಪೆ ಬೀಚ್ ವೊಂದರಲ್ಲಿ ಬರ್ತ್ ಡೇ ಆಚರಿಸಲು ಬಂದಿದ್ದ ಭಿನ್ನ ಕೋಮಿನ ಯುವಕ ಯುವತಿಯರ ತಂಡವೊಂದು ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳೇ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡ ಘಟನೆ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಡಿ 13 ರ ಬುಧವಾರ ಸಂಜೆ ವೇಳೆ ಆಗಮಿಸಿದ್ದ ಮೂರು ಮಂದಿ ಯುವಕ ಹಾಗೂ ಮೂರು ಮಂದಿ ಯುವತಿಯರು, ಸ್ನೇಹಿತೆಯೊಬ್ಬಳ ಬರ್ತ್ ಡೇ ಆಚರಿಸಲೆಂದು ಬೀಚ್ ಗೆ ಆಗಮಿಸಿದ್ದರು. ಈ ವೇಳೆ ಭಿನ್ನ ಕೋಮಿಗೆ ಸೇರಿದ ಯುವಕ ಯುವತಿಯರು ಅನುಚಿತವಾಗಿ ವರ್ತಿಸುವುದನ್ನು ಕಂಡ ಸ್ಥಳಿಯರು ಯುವಕ ಯುವತಿಯರ ಬಗ್ಗೆ ವಿಚಾರಣೆ ಆರಂಭಿಸಿದ್ದಾರೆ. ಈ ವೇಳೆ ಗುಂಪುಗೂಡಿದ ಸುಮಾರು ಇನ್ನೂರಕ್ಕೂ ಅಧಿಕ ಮಂದಿ ಬರ್ತ್ ಡೇ ಆಚರಿಸುತ್ತಿದ್ದ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮಲ್ಪೆ ಪೊಲೀಸರು ಯುವಕ ಯುವತಿಯರನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಈ ವೇಳೆ ಸ್ಥಳೀಯರು ಯುವಕ ಯುವತಿಯರ ಪೋಷಕರು ಇಲ್ಲಿಗೆ ಆಗಮಿಸಿ ಅವರನ್ನು ಕರೆದೊಯ್ಯುಬೇಕು ಎಂದು ಪಟ್ಟು ಹಿಡಿದ್ದಾರೆ. ಇದರಿಂದಾಗಿ ಮಲ್ಪೆ ಪೊಲೀಸರು ಹಾಗೂ ಸ್ಥಳೀಯರ ನಡುವೆ ಸ್ವಲ್ಪ ಹೊತ್ತಿನ ವಾಗ್ವಾದವೂ ನಡೆದು, ಬಳಿಕ ಪೊಲೀಸರು ಯುವಕ ಯುವತಿಯರನ್ನು ಠಾಣೆಗೆ ಕರೆದೊಯ್ದು ಮುಚ್ಚಳಿಕೆ ಬರೆಸಿ ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ. ಪಾರ್ಟಿ ನಡೆಸುತ್ತಿದ್ದವರಲ್ಲಿ ಮೂವರು ಯುವಕರು ಒಂದೇ ಕೋಮಿಗೆ ಸೇರಿದವರಾಗಿದ್ದು, ಮೂರು ಯುವತಿಯ ಆರು ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಕ್ಕೆ ಸೇರಿದ್ದಾಗಿ ತಿಳಿದುಬಂದಿದೆ. ಇಬ್ಬರು ಶೃಂಗೇರಿ ಹಾಗೂ ನಾಲ್ವರು ಉಡುಪಿ ಜಿಲ್ಲೆಗೆ ಸೇರಿದ ಯುವಕ ಯುವತಿಯರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.