ಮಂಗಳೂರು,ಜು 19(Daijiworld News/MSP): ಬಿಸಿಲು-ಮಳೆಯ ಕಣ್ಣಾ ಮುಚ್ಚಾಲೆಯಿಂದಾಗಿ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು, ಗುರುವಾರ ಮತ್ತೆ 21 ಪ್ರಕರಣಗಳು ದಾಖಲಾದ ವರದಿಯಾಗಿದೆ.
ಇನ್ನು ಡೆಂಗ್ಯೂ ಜ್ವರದಿಂದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೆಪ್ಪು ಪಿಎಲ್ ಗೇಟ್ ಸನಿಹದ 7 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಡೆಂಗ್ಯೂ ರೋಗದ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಬಾಲಕಿಯನ್ನು ಕಳೆದ ಹಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ. ಡೆಂಗ್ಯೂ ಜ್ವರದ ಹಿನ್ನಲೆಯಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗಿ ಈ ಸಾವು ಸಂಭವಿಸಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಮಂಗಳವಾರ ತಾನೇ ಶಂಕಿತ ಡೆಂಗ್ಯೂ ರೋಗಕ್ಕೆ ನಗರದ ಮೂರನೇ ತರಗತಿ ವಿದ್ಯಾರ್ಥಿ ಮೃತಪಟ್ಟಿದ್ದ. ಈ ಎರಡು ಪ್ರಕರಣಗಳ ಎಲಿಸಾ ಟೆಸ್ಟ್ ವರದಿ ಬರಬೇಕಾಗಿದ್ದು ಬಳಿಕವಷ್ಟೇ ಡೆಂಗ್ಯೂ ಜ್ವರ ಎಂದು ಸ್ಪಷ್ಟವಾಗಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.