ಬಂಟ್ವಾಳ ಡಿ 14 : ಕಲ್ಲಡ್ಕ ದ ತೆಂಗಿನಕಾಯಿ ಗೋಡೌನ್ ವೊಂದಕ್ಕೆ ಆಕಸ್ಮಿಕ ಬೆಂಕಿ ತಗಲಿ ಲಕ್ಷಾಂತರ ರೂ ನಷ್ಟ ಸಂಭವಿಸಿದ ಘಟನೆ ಡಿ. 14 ರ ಗುರುವಾರ ಬೆಳಿಗ್ಗೆ ನಡೆದಿದೆ. ಕಲ್ಲಡ್ಕ ದ ವರ್ತಕ ದಿನೇಶ್ ಶೆಣೈ ಎಂಬವರಿಗೆ ಸೇರಿದ ಈ ದಾಸ್ತಾನು ಕೊಠಡಿಯಲ್ಲಿ ಸಾವಿರಾರು ರೂಪಾಯಿ ಮೌಲ್ಯದ ತೆಂಗಿನಕಾಯಿಗಳನ್ನು ಹಾಗೂ ತೆಂಗಿನ ಚಿಪ್ಪುಗಳನ್ನು ದಾಸ್ತಾನು ಮಾಡಲಾಗಿತ್ತು. ಗುರುವಾರ ಬೆಳಗ್ಗಿನ ಜಾವ ದಾಸ್ತಾನು ಕೊಠಡಿಯಿಂದ ಹೊಗೆಯಾಡುತ್ತಿದ್ದುದನ್ನು ಕಂಡು ಪರಿಶೀಲನೆ ನಡೆಸಿದಾಗ ಬೆಂಕಿ ತಗಲಿರುವುದು ಗೊತ್ತಾಗಿದೆ.ತಕ್ಷಣವೇ ಬಂಟ್ವಾಳ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದು, ತಕ್ಷಣ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.
ಆದರೆ ಆ ವೇಳೆಗಾಗಲೇ ಲಕ್ಷಾಂತರ ಮೌಲ್ಯದ ತೆಂಗಿನಕಾಯಿ ಸುಟ್ಟುಕರಕಲಾಗಿದೆ. ಕೊಠಡಿಯ ಮೇಲ್ಚಾವಣಿ ಹಾಗೂ ಕಿಟಕಿಗಳಿಗೂ ಬೆಂಕಿ ತಗಲಿದೆ. ಬೆಂಕಿ ಆಕಸ್ಮಿಕಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.