ಉಡುಪಿ, ಜು 18 (Daijiworld News/SM): ಕೊಪ್ಪಳ ಜಿಲ್ಲೆಯ ಆನೆಗೊಂದಿಯಲ್ಲಿರುವ ನವ ವೃಂದಾವನದಲ್ಲಿ ವ್ಯಾಸರಾಜರ ವೃಂದಾವನವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ದುಷ್ಕರ್ಮಿಗಳ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಮಠಾಧೀಶಾರು ಖಂಡಿಸಿದ್ದಾರೆ.
ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಹಾಗೂ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಕಿಡಿಗೇಡಿಗಳ ಕೃತ್ಯಕ್ಕೆ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಘಟನೆಯಿಂದ ಅಘಾತವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ರಾಜ್ಯದ ಹೆಮ್ಮೆಯ ಸಂಕೇತವಾದ ವಿಜಯನಗರ ಸಾಮ್ರಾಜ್ಯದ ಅರಸ ಶ್ರೀಕೃಷ್ಣ ದೇವರಾಯನ ರಾಜಗುರುಗಳಾಗಿದ್ದ ವ್ಯಾಸರಾಜರ ವೃಂದಾವನ ರಕ್ಷಣೆ ಸರ್ಕಾರದ ಹೊಣೆ. ರಾಘವೇಂದ್ರ ಸ್ವಾಮೀಜಿಗಳ ಪೂರ್ವ ಅವತಾರವಾದ ವ್ಯಾಸರಾಜರು ದಾಸ ಸಾಹಿತ್ಯಕ್ಕೆ ಅಪೂರ್ವ ಕೊಡುಗೆ ಸಲ್ಲಿಸಿದ್ದಾರೆ. ಸರ್ಕಾರವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮಠಾಧೀಶರು ಆಗ್ರಹಿಸಿದ್ದಾರೆ.