ಉಡುಪಿ, ಜು 18 (Daijiworld News/MSP): ಅಕ್ರಮ ಜಾನುವಾರು ಸಾಗಾಟ ಜಾಲದಲ್ಲಿ ಭಾಗಿಯಾದ ನಾಲ್ವರು ಪೊಲೀಸರನ್ನು ಉಡುಪಿ ಜಿಲ್ಲಾ ಎಸ್ಪಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕೋಟ ಠಾಣೆಯ ಹೆಡ್ ಕಾನ್ಸ್ಟೇಬಲ್ ರಾಘವೇಂದ್ರ , ಉಡುಪಿ ಜಿಲ್ಲಾ ಶಸಸ್ತ್ರ ಮೀಸಲು ಪಡೆಯ ಎಎಸ್ಐ ಬಾಲಸುಬ್ರಮಣ್ಯ , ಹೆಡ್ ಕಾನ್ಸ್ಟೇಬಲ್ ಪ್ರಶಾಂತ್, ಕಾನ್ಸ್ಟೇಬಲ್ ಚಂದ್ರಶೇಖರ್ ಅವರನ್ನು ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.
ಇತ್ತೀಚೆಗೆ ಸಾಸ್ತಾನ ಟೋಲ್ ಗೇಟ್ ಬಳಿ ಕೋಟ ಠಾಣಾಧಿಕಾರಿ, ಖಡಕ್ ಎಸೈ ನಿತ್ಯಾನಂದ ಗೌಡ ವಾಹನ ತಪಾಸಣೆ ಮಾಡಿದಾಗ 13 ಕೋಣ ಹಾಗೂ 7 ಎಮ್ಮೆಗಳನ್ನು ಅಕ್ರಮವಾಗಿ ಮಾರಾಟಕ್ಕೆ ಸಾಗಿಸಲಾಗುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಆರು ಜನರ ಬಂಧನವಾಗಿತ್ತು. ಈ ಸಂದರ್ಭ ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಇಡೀ ಅಕ್ರಮ ಜಾನುವಾರು ಸಾಗಾಟ ಪ್ರಕರಣದಲ್ಲಿ ಜಿಲ್ಲೆಯ ಏಳು ಪೊಲೀಸ್ ಠಾಣೆ ಕೆಲವು ಪೊಲೀಸರು ಭಾಗಿಯಾಗಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿತ್ತು
ಕರಾವಳಿಯಲ್ಲಿ ಜಾನುವಾರು ಕಳವು ಪ್ರಕರಣಗಳು ಹೆಚ್ಚುತ್ತಿದ್ದಂತೆಯೇ ಸಾಸ್ತಾನದಲ್ಲಿ ಸಿಕ್ಕಿಬಿದ್ದ ಖದೀಮರನ್ನು ಸರಿಯಾಗಿ ವಿಚಾರಿಸಿದ ಎಸೈ ನಿತ್ಯಾನಂದ ಗೌಡ ಪ್ರಕರಣವನ್ನು ಅಲ್ಲಿಗೇ ಕೈ ಬಿಡಲಿಲ್ಲ. ಬದಲಿಗೆ ಆರೋಪಿಗಳ ಮೊಬೈಲ್ ನಂಬರಿಗೆ ಬಂದ ಕರೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಮೊಬೈಲ್ ಕಾಲ್ ರೆಕಾರ್ಡ್ ತೆಗೆದಾಗ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಈ ಅಕ್ರಮ ಕಳ್ಳದಂಧೆಯ ಹಿಂದೆ ಬಹುಪಾಲು ಪೊಲೀಸರ ಶಾಮೀಲಾತಿ ಇರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ರವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಕೃತ್ಯದಲ್ಲಿ ಪೊಲೀಸರು ಶಾಮೀಲಾಗಿರುವುದು ಬೇಸರದ ಸಂಗತಿ, ಈ ಪ್ರಕರಣ ಹೊರಬರಲು ಕೂಡ ಪೊಲೀಸ್ ಸಿಬ್ಬಂದಿಗಳೇ ಕಾರಣ . ಈ ಪ್ರಕರಣದಲ್ಲಿ ಭಾಗಿಯಾದ ಪ್ರತಿಯೊಬ್ಬರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ , ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯ ಕ್ರಮ ಜರಗಿಸುವುದಾಗಿ ಮಾಧ್ಯಮದವರಿಗೆ ಎಸ್ಪಿ ತಿಳಿದ್ದಾರೆ.