ಮಂಗಳೂರು, ಜು18(Daijiworld News/SS): ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೆಲ ದಿನಗಳಿಂದ ರೌಡಿಗಳ ಅಟ್ಟಹಾಸ ಮಿತಿ ಮೀರುತ್ತಿದ್ದು, ಇದನ್ನು ಮಟ್ಟ ಹಾಕಲು ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಹತ್ವದ ಸಭೆ ನಡೆದಿದೆ.
ನಗರದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಸಂದೀಪ್ ಪಾಟೀಲ್, ರೌಡಿಗಳ ಅಟ್ಟಹಾಸ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈಗಾಗಲೇ ಅನೇಕರು ಬಲಿಯಾಗಿದ್ದು ಸಾರ್ವಜನಿಕರೂ ಬೆಚ್ಚಿ ಬೀಳುವ ವಾತಾವರಣ ನಿರ್ಮಾಣವಾಗಿದೆ. ಕೊಲೆ, ಕೊಲೆಯತ್ನ ಪ್ರಕರಣಗಳು ಹೆಚ್ಚುತ್ತಲೇ ಇದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಉದ್ದೇಶದಿಂದ ನಗರದಲ್ಲಿನ ರೌಡಿಶೀಟರ್'ಗಳ ಮಾಹಿತಿಯನ್ನು ಇಲಾಖೆ ಕಲೆ ಹಾಕಿದ್ದು, ಒಟ್ಟು 150ಕ್ಕೂ ಅಧಿಕ ರೌಡಿಗಳನ್ನು ಗುರುತಿಸಲಾಗಿದೆ. ಈ ಪೈಕಿ 10 ನಟೋರಿಯಸ್ ರೌಡಿಗಳ ಮೇಲೆ ಕಠಿಣ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ನಗರದಲ್ಲಿ ರೌಡಿಶೀಟರ್ಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಜನ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಕೊಲೆ, ಕೊಲೆ ಯತ್ನ ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ದುಷ್ಕೃತ್ಯ ಎಸಗುತ್ತಿರುವ ರೌಡಿಗಳು ಅಪ್ರಾಪ್ತ ಯುವಕರನ್ನು ತಮ್ಮ ಕೃತ್ಯಗಳಿಗೆ ಬಳಸಿಕೊಳ್ಳುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಈ ಹಿನ್ನಲೆಯಲ್ಲಿ, ರೌಡಿಗಳ ಚಟುವಟಿಕೆಗಳನ್ನು ಮಟ್ಟ ಹಾಕಲು ನಗರ ಪೊಲೀಸರು ಟೊಂಕಕಟ್ಟಿ ನಿಂತಿದ್ದಾರೆ.