ಮಂಗಳೂರು, ಜುಲೈ 18(Daijiworld News/RD): ಗುರುವಾರ ಮುಂಜಾನೆಯಿಂದ ಸುರಿದ ಧಾರಾಕಾರ ಮಳೆಯು ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ, ಶಾಲಾವಿದ್ಯಾರ್ಥಿಗಳು, ವಾಹನ ಸವಾರರು ಹೀಗೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಬಾರಿ ಮಳೆಯ ಕೊರತೆ ಹೆಚ್ಚಾಗಿದ್ದು, ಇಂದು ಸುರಿದ ಮುಂಗಾರು ಮಳೆಯು ಕರಾವಳಿಯ ಜನರಲ್ಲಿ ಸಂತಸ ಮೂಡಿಸಿದೆ. ವಿಪರೀತವಾದ ಹವಾಮಾನ ವೈಪರಿತ್ಯದಿಂದ ಮಳೆಗಾಲವಿದ್ದರೂ ನಗರದಲ್ಲಿ ಬಿಸಿಲ ಧಗೆ ಆವರಿಸಿದ್ದು ಇಂದು ಸುರಿದ ವ್ಯಾಪಕ ಮಳೆ ನಗರವನ್ನು ತಂಪಾಗಿಸಿದೆ. ಮುಂಗಾರು ಮಳೆಯ ಸ್ಪರ್ಶವನ್ನು ಕರಾವಳಿಗೆ ನೀಡಿದೆ.
ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ 19 ರವರೆಗೆ ಕರಾವಳಿಯ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಕರಾವಳಿ ಭಾಗದಲ್ಲಿ ಇನ್ನೂ ಗಂಟೆಗೆ 45 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಈಗಾಗಲೇ ಹೈ ಅಲರ್ಟ್ ಘೋಷಿಸಿ ಎಚ್ಚರಿಕೆ ನೀಡಿದೆ. ಭಾರಿ ಮಳೆಯಾಗುವ ಹಿನ್ನೆಲೆಯಲ್ಲಿ ಕಡಲತೀರದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಈಗಾಗಲೇ ಬೀಚ್ ಹಾಗೂ ಇತರ ಪ್ರವಾಸಿತಾಣಗಳಿಗೆ ಸಾರ್ವಜನಿಕರು, ಪ್ರವಾಸಿಗರು ಭೇಟಿ ನೀಡುವ ವೇಳೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸುವಂತೆ ತಿಳಿಸಿದೆ.
ಮುಂಜಾನೆ ಸುರಿದ ಧಾರಾಕಾರ ಮಳೆಗೆ ನಗರದ ತಗ್ಗು ಪ್ರದೇಶಗಳಿಗೆ ನೀರುನುಗ್ಗಿ ಮನೆಮಂದಿ ಪರದಾಡುವಂತೆ ಆಗಿದ್ದು, ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರಿಗೆ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಇನ್ನೂ ಬೆಳಿಗ್ಗೆ ಶಾಲೆಗೆ ತೆರಳುವ ವೇಳೆ ಸುರಿದ ಮಳೆಯಿಂದಾಗಿ ಶಾಲಾ ಮಕ್ಕಳು ರಸ್ತೆಯಲ್ಲಿ ನಡೆದಾಡಲು ಹರಸಾಹಸ ಪಡಬೇಕಾದ ಸ್ಥಿತಿ ನಗರದ ಕೆಲವು ಭಾಗಗಳಲ್ಲಿ ಉಂಟಾಯಿತು. ಕುದ್ರೋಳಿ ಸಮೀಪ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತು ಜನರು ಸಂಧಿಗ್ಧ ಪರಿಸ್ಥಿತಿ ಎದುರಿಸಬೇಕಾಯಿತು. ನಗರದ ಸೆಂಟ್ರಲ್ ರೈಲ್ವೇ ಸ್ಟೇಷನ್ ಒಳಗೆ ಹಾಗೂ ಮುಂಭಾಗ ನೀರು ಆವರಿಸಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಯಿತು.