ಮಂಗಳೂರು, ಜು 18 (Daijiworld News/MSP): "ಅಡಿಕೆಯು ಆರೋಗ್ಯಕ್ಕೆ ಹಾನಿಕರ " ಎಂದು 2011 ಆಡಳಿತದಲ್ಲಿದ್ದ ಯುಪಿಎ ಸರಕಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅಫಿದವಿತ್ ಹಿಂದಕ್ಕೆ ಪಡೆಯಲು ವಿಶೇಷ ಪ್ರಯತ್ನ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ| ಹರ್ಷವರ್ಧನ್ ಭರವಸೆ ನೀಡಿದ್ದಾರೆ.
ಲೋಕಸಭೆಯಲ್ಲಿ ಈ ಅಫಿದವಿತ್ ಅನ್ನು ಉಲ್ಲೇಖ ಮಾಡಿ ಸಂಸದರೊಬ್ಬರು ಕೇಳಿದ ಪ್ರಶ್ನೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯಕ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಅಡಿಕೆ ಆರೋಗ್ಯಕ್ಕೆ ಹಾನಿಕರ ಹೌದು ಎಂಬ ಉತ್ತರ ನೀಡಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಂಸದರು, ಸಂಸದ ನಳಿನ್ ನೇತೃತ್ವದಲ್ಲಿ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗದ ಸಂಸದರು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಈ ವೇಳೆ ಅಡಿಕೆಯಿಂದ ದುಷ್ಪರಿಣಾಮ ಇಲ್ಲ, ಕೇಂದ್ರ ತೋಟ ಬೆಳೆಗಳ ಸಂಶೋಧನ ಸಂಸ್ಥೆಯ ಅಧ್ಯಯನ ವರದಿ ಹಾಗೂ ಸರ್ಕಾರಿ ಸಂಸ್ಥೆಗಳ ಸಂಶೋಧನಾ ವರದಿಗಳೇ ಅಡಿಕೆ ಸೇವನೆ ಆರೋಗ್ಯಕ್ಕೆ ಪೂರಕ ಎಂದು ದೃಢಪಡಿಸಿದೆ ಎಂದು ವಿವರಿಸಿದರು.
"ಅಡಿಕೆ ಬೆಳೆಯುವ ಭಾಗದ ಸಂಸದರು ಒಟ್ಟಾಗಿ, ರಾಜ್ಯದ ವಿವಿಧ ಸಂಶೋಧನಾ ಕೇಂದ್ರಗಳು ಅಡಿಕೆ ಪೂರಕವಾಗಿ ನೀಡಿರುವ ವರದಿಯನ್ನು ಪರಿಣಾಮಕಾರಿಯಾಗಿ ಸುಪ್ರೀಂ ಕೋರ್ಟ್ಗೆ ಸಲ್ಲಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು" ಎಂದು ಕರಾವಳಿ ಹಾಗೂ ಮಲೆನಾಡು ರೈತರು ಈ ಹಿಂದೆ ಒತ್ತಾಯಿಸಿದ್ದರು.
ಸಂಸದರ ಮನವಿಗೆ ಸ್ಪಂದಿಸಿದ ಸಚಿವರು ಅಫಿದವಿತ್ ಹಿಂಪಡೆಯಲು ಈಗಾಗಲೇ 2-3 ಬಾರಿ ಸಭೆ ನಡೆಸಲಾಗಿದೆ ಎಂದು ತಿಳಿಸಿದರು. ನಿಯೋಗದಲ್ಲಿ ಸಂಸದರಾದ ಶೋಭಾ ಕರಂದ್ಲಾಜೆ, ಜಿ.ಎಂ. ಸಿದ್ದೇಶ್ವರ್, ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.