ಮಂಗಳೂರು, ಜು18(Daijiworld News/SS): ಹಜ್ ಯಾತ್ರೆ ಮಾಡುವವರು ಅದೃಷ್ಟಶಾಲಿಗಳಾಗಿದ್ದು, ಸಮಸ್ತ ನಾಡಿನ ಪ್ರತಿನಿಧಿಗಳಾಗಿ ದೇಶದ ಒಳಿತಿಗಾಗಿ ಪ್ರಾರ್ಥನೆ (ದುವಾ) ಮಾಡಿ ಎಂದು ದ. ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.
ಕರ್ನಾಟಕ ರಾಜ್ಯ ಹಜ್ ಸಮಿತಿ ಅಶ್ರಯದಲ್ಲಿ ಹಜ್ ಕ್ಯಾಂಪ್ ನಿರ್ವಹಣಾ ಸಮಿತಿ ಮಂಗಳೂರಿನ ಸಹಯೋಗದೊಂದಿಗೆ ಬಜಪೆ ಅನ್ಸಾರ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳುವ ಹಜ್ ವಿಮಾನ ಯಾತ್ರೆ-2019ನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪವಿತ್ರ ಹಜ್ ಯಾತ್ರೆ ಮಾಡಬೇಕೆಂಬುದು ಪ್ರತಿಯೊಬ್ಬ ಮುಸ್ಲಿಂ ವ್ಯಕ್ತಿಯ ಕನಸಾಗಿರುತ್ತದೆ. ಆದರೆ ಎಲ್ಲರಿಂದ ಇದು ಸಾಧ್ಯವಿಲ್ಲ. ಅದಕ್ಕೆ ಅಲ್ಲಾಹನ ಕೃಪೆ ಬೇಕು ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ಹಜ್ ಘರ್ ನಿರ್ಮಾಣಕ್ಕೆ ಈಗಾಗಲೇ 70 ಸೆಂಟ್ಸು ಜಾಗ ನಿಗದಿಯಾಗಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಅನುದಾನ ನೀಡಲು ಮುಂದೆ ಬಂದಿದ್ದು ಸದ್ಯದಲ್ಲೇ ಶಿಲಾನ್ಯಾಸ ನಡೆಯಲಿದೆ ಎಂದು ತಿಳಿಸಿದ್ದಾರೆ.
ಸಚಿವ ಜಮೀರ್ ಆಹ್ಮದ್ ಖಾನ್ ಅವರು ಜಿಲ್ಲೆಯಿಂದ 11 ಉಲೇಮಾಗಳಿಗೆ ಹಾಗೂ ರಾಜ್ಯದಿಂದ 100ಕ್ಕಿಂತ ಹೆಚ್ಚು ಉಲೇಮಾಗಳಿಗೆ ಪವಿತ್ರ ಹಜ್ಯಾತ್ರೆ ಕೈಗೊಳ್ಳಲು ಸಹಾಯ ಮಾಡಲಿದ್ದಾರೆ ಎಂದು ತಿಳಿಸಿದರು.