ಮಂಗಳೂರು, ಜು18(Daijiworld News/SS): ಮಂಗಳೂರಿನಲ್ಲಿ ಡೆಂಗ್ಯೂ ಮತ್ತೆ ಸದ್ದು ಮಾಡುತ್ತಿದೆ. ಮಳೆ ಹಾಗೂ ಬಿಸಿಲಿನ ಆಟದ ಹವಾಮಾನದಲ್ಲಾಗುವ ವೈಪರಿತ್ಯಗಳಿಂದ ಸೊಳ್ಳೆಯ ಮೂಲಕ ಡೆಂಗ್ಯೂನಂತಹ ರೋಗ ಕಾಣಿಸಿಕೊಳ್ಳುತ್ತದೆ. ಸುಮಾರು ಮೂರು ದಿನಗಳಿಂದ ವಾರದವರೆಗೆ ಕಾಡುವ ಈ ವೈರಲ್ ಸೋಂಕು, ಗುಣವಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಉಲ್ಬಣಗೊಂಡರೆ ಮಾರಾಣಾಂತಿಕವಾಗಿಯೂ ಪರಿಣಮಿಸುತ್ತದೆ. ಸೂಕ್ತ ಮುಂಜಾಗರೂಕತೆ, ಜ್ವರ ಬಾಧಿಸಿದಲ್ಲಿ ಸೂಕ್ತ ಚಿಕಿತ್ಸೆ, ವಿಶ್ರಾಂತಿ ಅತಿ ಅಗತ್ಯ ಎನ್ನುವುದು ವೈದ್ಯರ ಅಭಿಪ್ರಾಯ.
ನಗರದಲ್ಲಿ ಈ ವರ್ಷ ಮಲೇರಿಯಾ ಸಂಖ್ಯೆ ತೀವ್ರ ಕುಸಿತ ಕಂಡಿದ್ದು, ಇತ್ತೀಚಿನವರೆಗೂ ಮಲೇರಿಯಾ ರಾಜಧಾನಿಯೆಂದೇ ಕರೆಯಲ್ಪಡುತ್ತಿದ್ದ ಮಂಗಳೂರು ಈ ವರ್ಷ ಡೆಂಗ್ಯೂ ತವರೂರಾಗಿ ಮಾರ್ಪಾಡು ಹೊಂದಿದೆ. ಮಂಗಳೂರು ಮಾತ್ರವಲ್ಲ, ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಡೆಂಗ್ಯೂ ಜ್ವರ ವ್ಯಾಪಕವಾಗುತ್ತಿದೆ.
200ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ನಗರವೊಂದರಲ್ಲೇ ಕಾಣಿಸಿಕೊಂಡಿದ್ದರೆ, ಜಿಲ್ಲಾದ್ಯಂತ 350ರಷ್ಟು ಪ್ರಕರಣಗಳು ಸದ್ಯ ವರದಿಯಾಗಿವೆ. ಈಗಲೂ ಆಸ್ಪತ್ರೆಗಳಿಗೆ ಜ್ವರದ ಹಿನ್ನೆಲೆಯಲ್ಲಿ ರೋಗಿಗಳು ಎಡತಾಕುವುದು ನಡೆಯುತ್ತಿದೆ. ಆರೋಗ್ಯ ಇಲಾಖೆ ಹೇಳುವ ಲೆಕ್ಕ ಜಿಲ್ಲೆಯಲ್ಲಿ ಆಸ್ಪತ್ರೆಗಳಿಗೆ ಬರುತ್ತಿರುವವರ ಸಂಖ್ಯೆಗೆ ಹೋಲಿಕೆಯಾಗುತ್ತಿಲ್ಲ.
ಮಂಗಳೂರಿನ ದಕ್ಷಿಣ ಭಾಗದಲ್ಲಿ ಡೆಂಗ್ಯೂ ತೀವ್ರಗೊಂಡಿದೆ. ಜೂನ್ನಲ್ಲಿ ಮುಳಿಹಿತ್ಲು ಗೋರಕ್ಷದಂಡು ಬಳಿ ಕೆಲ ಮನೆಗಳಲ್ಲಿ ಕಾಣಿಸಿಕೊಂಡ ಡೆಂಗ್ಯೂ ಈಗ ಎಲ್ಲೆಡೆ ಹರಡತೊಡಗಿದೆ. ಗುಜ್ಜರಕೆರೆಯ ಸುತ್ತಮುತ್ತಲಿನ ಅರಕೆರೆ ಬೈಲು, ಜಲಜಮ್ಮ ಕಾಂಪೌಂಡ್, ಅಂಬಾನಗರ, ಮಂಗಳಾದೇವಿ, ಜೆಪ್ಪು ಮುಂತಾದೆಡೆಗಳಲ್ಲಿ ಪ್ರಕರಣಗಳು ಪತ್ತೆಯಾಗತೊಡಗಿವೆ.