ಬೆಂಗಳೂರು, ಡಿ 13 : ಸಹೋದ್ಯೋಗಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ನ್ಯಾಯಂಗ ಬಂಧನದಲ್ಲಿದ್ದ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಅವರಿಗೆ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಸಿಟಿ ಸಿವಿಲ್ ಕೋರ್ಟ್ ಬುಧವಾರ ಕೇವಲ ಮೂರು ದಿನಗಳ ಮಧ್ಯಂತರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಡಿಸೆಂಬರ್ 16 ರ ವರೆಗೆ ಮಧ್ಯಂತರ ಆದೇಶ ನೀಡಲಾಗಿದ್ದು, ವಿಚಾರಣೆ ಮುಂದೂಡಲಾಗಿದೆ. ರವಿ ಬೆಳಗೆರೆ ಪರ ವಕೀಲ ದಿವಾಕರ್ ಅವರು ಇಂದು ಬೆಳಗ್ಗೆ ಸೆಷನ್ಸ್ ಕೋಟ್ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಒಂದು ಲಕ್ಷ ಬಾಂಡ್, ಇಬ್ಬರ ಶ್ಯೂರಿಟಿ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಮತ್ತು ಪೊಲೀಸ್ ವಿಚಾರಣೆಗೆ ಸಹಕರಿಸುವಂತೆ ಷರತ್ತು ವಿಧಿಸಲಾಗಿದೆ. ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಹೀಗಾಗಿ ಇದು ಮಧ್ಯಂತರ ಜಾಮೀನು ನೀಡಬಹುದಾದಂತಹ ಪ್ರಕರಣ ಎಂದು ನ್ಯಾಯಾಧೀಶ ಮಧುಸೂದನ್ ಅಭಿಪ್ರಾಯಪಟ್ಟು ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದರು.