ಉಡುಪಿ, ಜು 17 (Daijiworld News/SM): ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥ ಮಹಿಳೆಯರು ವಿವಿಧ ಪಿಜಿಗಳಲ್ಲಿ ಆಶ್ರಯ ಪಡೆದಿದ್ದು, ಮಹಿಳೆಯರ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಪಿ.ಜಿ.ಗಳನ್ನು ಆಗಸ್ಟ್ ಅಂತ್ಯದೊಳಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚನೆ ನೀಡಿದ್ದಾರೆ.
ಅವರು, ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ, ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.
ಮಣಿಪಾಲದ ಉದ್ಯೋಗಸ್ಥ ಮಹಿಳೆಯರ ವಸತಿ ಗೃಹವೊಂದರ ಕಟ್ಟಡ ದುರಸ್ಥಿ ನಡೆಯುತ್ತಿದ್ದು, ಮಹಿಳೆಯರ ಸುರಕ್ಷತೆಗೆ ಸಿಸಿ ಟಿವಿ ಅಳವಡಿಕೆಗೆ ಸೂಚಿಸಿದ್ದರೂ ಈವರೆಗೆ ಸಿಸಿಟಿವಿ ಅಳವಡಿಸದಿರುವ ಬಗ್ಗೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು. ತಕ್ಷಣದಲ್ಲಿ ಸಿಸಿಟಿವಿ ಅಳವಡಿಸುವಂತೆ ಹಾಸ್ಟೆಲ್ ವಾರ್ಡನ್ಗೆ ಸೂಚನೆ ನೀಡಿ, ಆಗಸ್ಟ್ 15 ರ ಒಳಗೆ ಹಾಸ್ಟೆಲ್ನಲ್ಲಿರುವ ಇತರ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್ ಅವರಿಗೆ ಸೂಚಿಸಿದರು.
ಕಟಪಾಡಿಯಲ್ಲಿರುವ ಮಹಿಳಾ ಮಂಡಳಿ ಉದ್ಯೋಗಸ್ಥ ಮಹಿಳೆಯರ ವಸತಿ ಗೃಹ ನಿರ್ಮಾಣ ಕಾರ್ಯ ಅನುದಾನದ ಕೊರತೆಯಿಂದ ಕುಂಠಿತಗೊಂಡಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಮಹಿಳೆಯರು ಯಾವುದೇ ತುರ್ತು ಸಂದರ್ಭದಲ್ಲಿ ರಕ್ಷಣೆ ಹಾಗೂ ನೆರವಿಗೆ ಸಹಾಯವಾಣಿ 181ಗೆ ಕರೆಮಾಡಿ, ಸಹಾಯ ಪಡೆಯಲು ಅವಕಾಶ ಇರುವ ಬಗ್ಗೆ ಮಾಹಿತಿ ನೀಡಿ, ಈ ಸಹಾಯವಾಣಿಗೆ ಈವರೆಗೆ ಬಂದಿರುವ ಕರೆಗಳು ಹಾಗೂ ಅವುಗಳ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿಯನ್ನು ಮುಂದಿನ ಸಭೆಯಲ್ಲಿ ನೀಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.