ಮಂಗಳೂರು, ಜು 17 (Daijiworld News/SM): ನಗರದಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮಹಾನಗರ ಪಾಲಿಕೆಯ ಕಮೀಷನರ್ ಅವರಿಗೆ ಸೂಚಿಸಿರುವುದಾಗಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಪಾಲಿಕೆಯ ಕಮೀಷನರ್ ಅವರು ಆರೋಗ್ಯ ವಿಭಾಗ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಆದರೆ ನಾಗರಿಕರು ಮತ್ತು ಮಕ್ಕಳು ಕೂಡ ನಮ್ಮ ಸುತ್ತಮುತ್ತಲೂ ಸ್ವಚ್ಚತೆ ಇಲ್ಲದಂತಹ ಪ್ರದೇಶಗಳಲ್ಲಿ, ಕೊಳಚೆ ನೀರು ಹರಿಯುವ ಪ್ರದೇಶಗಳಲ್ಲಿ ಮತ್ತು ಸೊಳ್ಳೆ ಉತ್ಪತ್ತಿಯಾಗುವ ಕಡೆ ಸಂಚರಿಸದೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
ಜ್ವರದ ಲಕ್ಷಣ ಕಂಡುಬಂದಲ್ಲಿ ತಡಮಾಡದೆ ವೈದ್ಯರ ಬಳಿ ಪರೀಕ್ಷೆಗೆ ಒಳಪಡಬೇಕು. ನಾನು ಈಗಾಗಲೇ ಡೆಂಗ್ಯೂ ಪೀಡಿತ ಪ್ರದೇಶಗಳಿಗೆ ತೆರಳಿ ಅಲ್ಲಿ ಪರಿಶೀಲನೆ ಮಾಡಿ ಜಿಲ್ಲಾ ಆರೋಗ್ಯಾಧಿಕಾರಿಗಳೊಡನೆ ಸಮಾಲೋಚನೆ ಮಾಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಹೇಳಿದ್ದೇನೆ ಎಂದರು.
ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿ ಅವರನ್ನು ಸಾರ್ವಜನಿಕ ಸೇವೆಗೆ ಬಳಸಿಕೊಳ್ಳಲಾಗುವುದು. ಹಾಗೆ ವೈದ್ಯರು ಸ್ವಯಂಪ್ರೇರಿತವಾಗಿ ಮುಂದೆ ಬಂದು ಈ ರೋಗ ಹರಡದಂತೆ ನಮ್ಮೊಂದಿಗೆ ಕೈಜೋಡಿಸಬೇಕು. ಮನೆಗಳ ಒಳಗೆ ಕೂಡ ಅಗತ್ಯ ಬಿದ್ದರೆ ಫಾಂಗಿಂಗ್ ಮಾಡಲಾಗುವುದು. ಜನರು ಸಹಕರಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಮನವಿ ಮಾಡಿಕೊಂಡಿದ್ದಾರೆ.