ಮಂಗಳೂರು, ಡಿ 13: ಯುವತಿಯೊಂದಿಗೆ ಸುತ್ತಾಡುತ್ತಿದ್ದ ಅನ್ಯಕೋಮಿನ ಯುವಕನಿಗೆ ಧರ್ಮದೇಟು ನೀಡಿದ ಘಟನೆ ಡಿ 13 ರ ಬುಧವಾರ ನಡೆದಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯ ಬಸ್ ನಿಲ್ದಾಣದಲ್ಲಿ ಉಳ್ಳಾಲ ಮೂಲದ ನಿಸಾರ್ ಎಂಬಾತ ಆಕಾಶ ಭವನ ಮೂಲದ ಯುವತಿ ಜೊತೆಗೆ ಸರಸವಾಡುತ್ತಿದ್ದುದನ್ನು ಗಮನಿಸಿದ ಹಿಂದು ಸಂಘಟನೆ ಕಾರ್ಯಕರ್ತರು ಆತನಿಗೆ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಜತೆಗೆ ಆತ ತಪ್ಪೊಪ್ಪಿಗೆ ಹೇಳಿಕೆ ನೀಡುವುದನ್ನು ಮೊಬೈಲಿನಲ್ಲಿ ಚಿತ್ರೀಕರಿಸಿದ್ದಾರೆ. ಸಂಘಟನೆ ಕಾರ್ಯಕರ್ತರು ಯುವಕನ ಬೆನ್ನು ಬೀಳುತ್ತಿದ್ದಂತೆ ಯುವತಿ ಪರಾರಿಯಾಗಿದ್ದಾಳೆ. ಹಿಂದು ಯುವತಿಯರನ್ನು ಪ್ರೀತಿಸುವ ನಾಟಕವಾಡಿ ಮುಸ್ಲಿಂ ಆಗಿ ಮತಾಂತರಿಸುವ ಜಾಲ ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಹಿಂದು ಸಂಘಟನೆ ಕಾರ್ಯಕರ್ತರು ಆಕ್ರೋಶಗೊಂಡು ನೈತಿಕ ಪೊಲೀಸ್ ಗಿರಿ ಮೆರೆದಿದ್ದಾರೆ ಎನ್ನಲಾಗುತ್ತಿದೆ. ಇವರಿಬ್ಬರೂ ನಗರದ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.