ಮಂಗಳೂರು, ಜು 17 (Daijiworld News/MSP): ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವಾಹನ ಪಾರ್ಕಿಂಗ್ ಪ್ರದೇಶದಲ್ಲಿ ಜು.12 ರ ಶುಕ್ರವಾರ ಮಧ್ಯಾಹ್ನದ ವೇಳೆಗೆ ಅಚಾನಕ್ ಆಗಿ ರಕ್ತದ ಕಲೆ ಕಂಡುಬಂದ ಹಿನ್ನಲೆಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಆಗಮಿಸಿ ರಕ್ತದ ಮಾದರಿ ಸಂಗ್ರಹಿಸಿದ್ದು ವರದಿಗಾಗಿ ಕಳುಹಿಸಿತ್ತು. ಇದೀಗ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದಿದ್ದು, ಕುತೂಹಲಕಾರಿ ವಿಚಾರ ಬಹಿರಂಗಗೊಂಡಿದೆ.
ಜು.12 ರಂದು ಕಸ ಗುಡಿಸುವವರು ನ್ಯಾಯಾಲಯದ ಎದುರು ಪ್ರವೇಶ ದ್ವಾರದ ಬಳಿ ಇರುವ ವಾಹನ ಪಾರ್ಕಿಂಗ್ ಸ್ಥಳದಲ್ಲಿ ರಕ್ತ ಚೆಲ್ಲಿರುವುದನ್ನು ಮಧ್ಯಾಹ್ನ 2.30 ಗಂಟೆ ವೇಳೆಗೆ ನೋಡಿದ್ದರು. ಬಳಿಕ ಸ್ಥಳೀಯರಿಗೂ ಈ ಬಗ್ಗೆ ಅನುಮಾನ ಬಂದು ಬಂದರು ಪೊಲೀಸ್ ಇನ್ಸ್ಟೆಕ್ಟರ್ಗೆ ಮಾಹಿತಿ ನೀಡಿದ್ದರು. ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ವಕೀಲರೋರ್ವರ ಸ್ಕಾರ್ಪಿಯೋ ವಾಹನದ ಮೇಲೂ ರಕ್ತ ಎರಚಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಾತ್ರವಲ್ಲದೆ ಸುತ್ತಮುತ್ತದ ಸುಮಾರು 30 ಮೀಟರ್ ದೂರದಲ್ಲೂ ರಕ್ತದ ಕಲೆ ಕಂಡುಬಂದಿತ್ತು.
ಬಂದರು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ರಕ್ತದ ಮಾದರಿ ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದರು. ಸಿಸಿಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿತ್ತು. ಆದರೆ ಯಾವುದೇ ಬೇರೆ ಮಾಹಿತಿ ಲಭ್ಯವಾಗಿರಲಿಲ್ಲ. ರಕ್ತ ಚೆಲ್ಲಿರುವ ರೀತಿಯನ್ನು ಗಮನಿಸಿದರೆ ತಲವಾರಿನಿಂದ ಕಡಿದು ಗಾಯಗೊಳಿಸಿದಂತೆ ಮೇಲ್ನೋಟಕ್ಕೆ ಕಂಡು ಬಂದಿತ್ತು.
ಇಷ್ಟೆಲ್ಲಾ ಆತಂಕಕ್ಕೆ ಕಾರಣವಾಗಿದ್ದ ರಕ್ತದ ಕಲೆಯ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ನೀಡಿದ್ದು, ಈ ರಕ್ತದ ಮಾದರಿ ನಾಯಿಯದ್ದಾಗಿದೆ ಎಂದು ವರದಿ ನೀಡಿದೆ. ಹೀಗಾಗಿ ಕೂತೂಹಲ ಹುಟ್ಟಿಸಿದ್ದ ಪ್ರಕರಣಕ್ಕೆ ಪೊಲೀಸರು ಅಂತ್ಯ ಹಾಡಿದ್ದಾರೆ.