ಕಾಸರಗೋಡು, ಜು 17 (Daijiworld News/MSP): ಸಮುದ್ರ ಗಡಿಯ ಉಲ್ಲಂಘಿಸಿದ ಕಾರಣಕ್ಕಾಗಿ ಇಂಡೋನೇಷ್ಯಾದಲ್ಲಿ ಕಾಸರಗೋಡು ನಿವಾಸಿಗಳು ಸೇರಿದಂತೆ 22 ಮಂದಿ ಭಾರತೀಯರು ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಹಡಗು ನೌಕಾಪಡೆ ವಶದಲ್ಲಿದೆ ಎನ್ನಲಾಗಿದೆ. ಹಡಗಿನಲ್ಲಿ ಉಪ್ಪಳ ಪಾರೆಕಟ್ಟೆಯ ಪಿ. ಕೆ ಮೂಸಾಕು೦ಞ , ಕುಂಬಳೆ ಆರಿಕ್ಕಾಡಿ ಯ ಕಲಂದರ್ ಸೇರಿದಂತೆ ೨೨ ಮಂದಿ ಸಿಲುಕಿಕೊಂಡಿದ್ದಾರೆ .
ಮಾರ್ಚ್ ತಿಂಗಳಳಲ್ಲಿ ಮುಂಬೈ ಯಿಂದ ಸಿಂಗಾಪುರಕ್ಕೆ ಹೊರಟ ಎಂ . ಟಿ ಪೆಗಾಸಸ್ ಎಂಬ ಸರಕು ಹಡಗು ಇಂಡೋನೇಷ್ಯಾ ಸಮುದ್ರ ಉಲ್ಲಂಘನೆ ಮಾಡಿದ ಹಿನ್ನಲೆಯಲ್ಲಿ ಅಲ್ಲಿನ ನೌಕಾಪಡೆ ಸಿಬಂದಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ .
ರಾಸಾಯನಿಕ ವಸ್ತು ಹೇರಿಕೊಂಡು ಸಿಂಗಾಪುರಕ್ಕೆ ಹೊರಟ ಹಡಗಿನಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಬಳಿಕ ಈ ಹಡಗು ವಿರುದ್ಧ ದಿಕ್ಕಿನಲ್ಲಿ ಸಾಗಿ ಇಂಡೋನೇಷ್ಯಾ ಸಮುದ್ರ ತೀರದತ್ತ ಸಾಗಿದೆ. ಈ ಸಂದರ್ಭದಲ್ಲಿ ನೌಕಾಪಡೆ ವಶಕ್ಕೆ ತೆಗೆದುಕೊಂಡಿದೆ. ಹಡಗು ಐದು ತಿಂಗಳಿನಿಂದ ವಶದಲ್ಲಿದ್ದರೂ ತಡವಾಗಿ ಘಟನೆ ಬೆಳಕಿಗೆ ಬಂದಿದೆ.
ಹಡಗಿನಲ್ಲಿ ಆಹಾರ, ನೀರು , ಔಷಧಿಗಳು ಖಾಲಿಯಾಗಿವೆ ಎಂದು ಮೂಸಾ ಕು೦ಞ ಮನೆಯವರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಹಡಗನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಭಾರತೀಯ ರಾಯಭಾರಿ ಜೊತೆ ಮೂರು ಬಾರಿ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನ ವಾಗಲಿಲ್ಲ ಎನ್ನಲಾಗಿದೆ. ಹಡಗು ನೌಕರರು ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ದೂರು ನೀಡಿದರೂ ಈ ಬಗ್ಗೆ ಪ್ರಕ್ರಿಯೆ ವಿಳಂಬಗೊಂಡಿದೆ.
ಹಡಗು ಗಡಿ ಉಲ್ಲಂಘನೆ ಮಾಡಿದ ಬಗ್ಗೆ ದಿನಗಳ ಹಿಂದೆಯಷ್ಟೇ ಪ್ರಕರಣ ನ್ಯಾಯಾಲಯದ ಮೆಟ್ಟಲೇರಿದ್ದು, ಪ್ರಕರಣ ಇತ್ಯರ್ಥ ವಿಳಂಬಗೊಂಡಲ್ಲಿ ಹಡಗಿನಲ್ಲಿರುವವರ ಸ್ಥಿತಿ ಏನೆಂಬುದು ಪ್ರಶ್ನೆಯಾಗಿ ಉಳಿದುಕೊಂಡಿದೆ.