ಮಂಗಳೂರು, ಜು17(Daijiworld News/SS): ವಿಶ್ವಾಸಮತ ಗಳಿಸುವ ನಂಬಿಕೆಯಿದೆ. ಸರ್ಕಾರ ಸದ್ಯಕ್ಕೆ ಸುಭದ್ರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಸದ್ಯಕ್ಕೆ ಸುಭದ್ರವಾಗಿದೆ. ಯಾವುದೇ ಆತಂಕ ನಮಗಿಲ್ಲ. ಅತೃಪ್ತರು, ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಇದ್ದೇವೆ. ವಿಶ್ವಾಸಮತ ಗಳಿಸುವ ನಂಬಿಕೆಯಿದೆ. ಕುಟುಂಬದಲ್ಲಿ ಸಣ್ಣ ಪುಟ್ಟ ಭೇದ ಭಾವ ಸಹಜ. ಇಲ್ಲೂ ಹಾಗೆಯೇ. ಅವೆಲ್ಲಾ ಸರಿಯಾಗುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಳೆ ವಿಶ್ವಾಸಮತ ಸಾಬೀತಿಗೆ ಅವಕಾಶವಿದೆ. ಎಲ್ಲವೂ ಸುಸೂತ್ರವಾಗಿ ನಡೆಯಲಿದೆ. ನಮ್ಮಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಬೇರೆ ಬೇರೆ ಅಲ್ಲ. ನಮ್ಮ ಸರ್ಕಾರ ಒಂದೇ, ಅದೇ ಸಮ್ಮಿಶ್ರ ಸರ್ಕಾರ. ನಾವು ವಿಶ್ವಾಸ ಮತ ಗೆಲ್ಲುತ್ತೇವೆ. ಪ್ರಜಾಪ್ರಭುತ್ವದ ಅನುಸಾರ ಆಯ್ಕೆಯಾದವರು ನಾವು. ನಮ್ಮನ್ನು ಯಾರೂ ಏನೂ ಮಾಡಲು ಆಗುವುದಿಲ್ಲ ಎಂದು ಕರ್ನಾಟಕದಿಂದ ಇಡೀ ದೇಶಕ್ಕೆ ಸಂದೇಶ ಹೋಗುತ್ತದೆ ಎಂದು ಹೇಳಿದ್ದಾರೆ.
ಅತೃಪ್ತ ಶಾಸಕರು, ನಾಳೆ ನಡೆಯುವ ವಿಶ್ವಾಸಮತ ಯಾಚನೆಯಲ್ಲಿ ಭಾಗವಹಿಸಲೇಬೇಕು ಎಂದು ವಿಪ್ ಮೂಲಕ ಒತ್ತಾಯ ಮಾಡುವಂತಿಲ್ಲ ಎಂದು ಇಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಈ ತೀರ್ಪು ಬಂದ ಮೇಲೆ, ವಿಶ್ವಾಸಮತ ಯಾಚನೆವರೆಗೂ ಕಾಯದೇ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು, ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಬಿಜೆಪಿಯವರೂ ಒತ್ತಾಯಿಸಿದ್ದಾರೆ. ಇದರ ನಡುವೆಯೂ ಖಾದರ್ ಸರ್ಕಾರ ಉಳಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.