ಕಾರ್ಕಳ, ಜು 17(Daijiworld News/MSP): ಕಾರ್ಕಳ-ಉಡುಪಿ ನಡುವಿನ ನೀರೆ ಗುಡ್ಡೆಯಂಗಡಿವರೆಗಿನ ರಾಜ್ಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿ ಮೊಟಕುಗೊಂಡು ತಿಂಗಳುಗಳೇ ಉರುಳಿದೆ. ಸುಗಮ ಸಂಚಾರಕ್ಕೆ ಅನುವು ಆಗುವ ರೀತಿಯಲ್ಲಿ ನಡೆಯಬೇಕಾಗಿದ್ದ ಈ ಕಾಮಗಾರಿ ಇದೀಗ ಅಪಾಯವನ್ನೇ ತಂದೊಡ್ಡಿದೆ.
ಕಾರ್ಕಳದ ಅಯ್ಯಪ್ಪನಗರದಿಂದ ಬೈಲೂರು-ನೀರೆ ಗುಡ್ಡೆಯಂಗಡಿ ವರೆಗಿನ ರಸ್ತೆಯು ವಿಸ್ತರಣೆಗೊಳ್ಳುವ ಕಾಮಗಾರಿ ನಡೆಯುತ್ತಿತ್ತು. ಅದಕ್ಕೆ ಅನುಕೂಲವಾಗಿ ರಸ್ತೆ ಮಧ್ಯೆ ನೂತನ ಚರಂಡಿಯನ್ನು ನಿರ್ಮಿಸಲಾಗಿತ್ತು. ಚರಂಡಿಯ ಮೇಲ್ಮುಖವಾಗಿ ಕಬ್ಬಿಣದ ತಡೆಗೋಡೆ ನಿರ್ಮಿಸಲು ಕಾರ್ಯಕ್ಕೆ ಅಗತ್ಯವಾಗ ಕಬ್ಬಿಣ ಸರಳನ್ನು ಜೋಡಣೆ ಮಾಡಲಾಗಿತ್ತು. ಕಾಮಗಾರಿ ಮೊಟಕು ಗೊಂಡಿರುವುದರಿಂದ ಸರಳುಗಳು ಬಾನ್ನೆತ್ತರಕ್ಕೆ ಚಾಚಿಕೊಂಡಿದೆ.
ಅಪಾಯಕಾರಿ ರಸ್ತೆ
ಅಯ್ಯಪ್ಪ ನಗರದಿಂದ ಬೈಲೂರು ವರೆಗೆ ಹಲವು ಕಡೆಗಳಲ್ಲಿ ರಸ್ತೆ ಮಧ್ಯೆದಲ್ಲಿ ಚರಂಡಿಗಳು ನಿರ್ಮಿಸಲಾಗಿದ್ದು, ಇಕ್ಕಲೆಗಳಲ್ಲಿ ಕಬ್ಬಿಣ ಸರಳುಗಳು ಹೊರ ಚಾಚಿಕೊಂಡಿರುವುದರಿಂದ ಅಪಾಯಕಾರಿ ರಸ್ತೆಯಾಗಿ ಮಾರ್ಪಟ್ಟಿದೆ. ಈ ಕುರಿತು ಸ್ಥಳೀಯ ನಾಗರಿಕರು ಇಲಾಖಾಧೀಕಾರಿಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿದೆ.
ಕೇಂದ್ರೀಯಾ ರಸ್ತೆ ನಿಧಿ
ಕೇಂದ್ರೀಯಾ ರಸ್ತೆ ನಿಧಿ ಯೋಜನೆಯಡಿಯಲ್ಲಿ ರೂ.25 ಕೋಟಿ ವೆಚ್ಚದಲ್ಲಿ ಅಯ್ಯಪ್ಪ ನಗರದಿಂದ ಬೈಲೂರು-ನೀರೆ ಗುಡ್ಡೆಯಂಗಡಿಯ ತನಕ ಅಂದರೆ ಕಾರ್ಕಳ-ಉಡುಪಿ ತಾಲೂಕಿನ ಗಡಿಭಾಗದ ವರೆಗೆ ರಸ್ತೆ ವಿಸ್ತರಣೆ ಕಾಮಗಾರಿ ಇದರಲ್ಲಿ ಒಳಗೊಂಡಿದೆ. ಶಾಸಕ ಸುನೀಲ್ಕುಮಾರ್ ಅವರ ಮುತುವರ್ಜಿಯಿಂದ ಕೇಂದ್ರ ಸರಕಾರವು ಇಷ್ಟೊಂದು ದೊಡ್ಡ ಮೊತ್ತದ ಅನುದಾನ ಬಿಡುಗಡೆಗೊಳಿಸಿದೆ. ಕಾರಣಾಂತರಗಳಿಂದ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಈ ಎಲ್ಲಾ ಸಮಸ್ಯೆಗೆ ಕಾರಣವಾಗಿದೆ.