ಕಾರ್ಕಳ ಡಿ 13 : ಮಂಗಳೂರು ವಿಮಾನ ನಿಲ್ದಾಣವನ್ನು ವಿಸ್ತೃತಗೊಳಿಸಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕಾರ್ಗೋ ಹಬ್ ನಿರ್ಮಾಣಕ್ಕಾಗಿ ವಿಮಾನ ನಿಲ್ದಾಣ ಪ್ರಾಧಿಕಾರವು ರೂಪುರೇಷಗಳನ್ನು ತಯಾರಿಸಿದ್ದು ಸುಮಾರು 2500 ಎಕರೆ ಭೂಮಿಯ ಅಗತ್ಯತೆ ಇದ್ದು ಇದೀಗ ಗ್ರಾಮಸ್ಥರಲ್ಲಿ ಭೂಮಿ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಈ ಬೃಹತ್ ಯೋಜನೆಯನ್ನು ಕಾರ್ಯರೂಪಗೊಳಿಸುವ ನಿಟ್ಟಿನಲ್ಲಿ ಕಾರ್ಕಳ ತಾಲೂಕಿನ ಇನ್ನಾ ಗ್ರಾಮವನ್ನು ಕೇಂದ್ರೀಕೃತವಾಗಿಸಿ ಬೆಳ್ಮಣ್, ಮುಲ್ಲಡ್ಕ, ಮುಂಡ್ಕೂರು, ಪಲಿಮಾರು, ಎಲ್ಲೂರು , ಸಾಂತೂರು, ನಂದಿಕೂರು , ಅತಿಕಾರಿಬೆಟ್ಟು ಹಾಗೂ ಉಡುಪಿ ತಾಲೂಕಿನ ಹಿರಿಯಡ್ಕ ಮತ್ತು ಕುಂದಾಪುರ ತಾಲೂಕಿನ ಬೈಂದೂರು, ಶೀರೂರು ,ಸಿದ್ದಾಪುರ ಗ್ರಾಮಗಳಲ್ಲಿ ವಿಮಾನ ನಿಲ್ದಾಣ ಮಾಡುವ ಬಗ್ಗೆ ಸುದ್ದಿಗಳು ಕೇಳಿ ಬರುತ್ತಿದೆ.
ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಮೂರು ಕಡೆ ಪರ್ಯಾಯ ಜಮೀನುಗಳನ್ನು ಗುರುತಿಸುವಂತೆ ವಿಮಾನ ನಿಲ್ದಾಣ ಪ್ರಾಧಿಕಾರವು ದಿನಾಂಕ 1/06/2017 ರಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ನಿರ್ಣಾಯ ಕೈಗೊಂಡಿದೆ. ಮಂಗಳೂರು ವಿಮಾನ ನಿಲ್ದಾಣದ ಅಭಿವೃದ್ದಿ , ವಾಹನದಟ್ಟಣೆಯನ್ನು ನಿಭಾಯಿಸುವ ನಿಟ್ಟಿನಲ್ಲಿ 30 ಎಕ್ರೆ ಸ್ಥಳವನ್ನು ರನ್ವೇಗಾಗಿ ಕಾದಿರಿಸಲು 3 ಎಕ್ರೆ ಸ್ಥಳವನ್ನು ರನ್ ವೇಯ ಕೊನೆ ಭಾಗದಲ್ಲಿ ಸುರಕ್ಷೆತೆಗಾಗಿ ಕಾದಿರಿಸಲು ತಿಳಿಸಲಾಗಿದೆ.
ಬಾಕಿಯುಳಿದ ಕಾಮಗಾರಿಗಳಾದ ಪೂರ್ಣ ಉದ್ದದ ಭೂಮಿ, ಭೂಮಿ ಮತ್ತು ಸೇತುವೆ ಪೂರ್ಣ ಉದ್ದದ ಸೇತುವೆ, ಕಡಿಮೆ ಪ್ರಮಾಣದಲ್ಲಿ ಭೂ ಕೆಲಸ ಮತ್ತು ಸೇತುವೆ ನಿರ್ಮಾಣಕ್ಕಾಗಿ ಪ್ರಸ್ತಾಪಗಳನ್ನು ಮಾಡಲಾಗಿದೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರತೀ ವರ್ಷ ಬಹುತೇಕ ಪ್ರಯಾಣಿಕರು ಆಗಮಿಸುತ್ತಿದ್ದರು. ಕಳೆದ 5 ವರ್ಷಗಳಿಂದ ಈ ಸಂಖ್ಯೆ ದ್ವಿಗುಣಗೊಂಡಿದೆ. ಈ ವರ್ಷಗಳಲ್ಲಿ ಪ್ರತೀ ನಿತ್ಯ ಮಂಗಳೂರು ರನ್ ವೇಯಲ್ಲಿ ೫೬ ವಿಮಾನಾಗಳು ಹಾರಾಟ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ೮೦ ರಿಂದ ೧೦೨ ವಿಮಾನಗಳು ಮಂಗಳೂರು ರನ್ವೇಯಲ್ಲಿ ಓಡಾಟ ನಡೆಸಲಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ.
ಗ್ರೀನ್ ಫೀಲ್ಡ್ ಏರ್ಪೋಟ್ ನಿರ್ಮಾಣಕ್ಕಾಗಿ 12000 ಅತಿ ಉದ್ದದ ರನ್ ವೇ ಅಗತ್ಯತೆಯಿದೆ. ಈ ರನ್ ವೇ ನಿರ್ಮಾಣಕ್ಕಾಗಿ ರೂ.1000 ಕೋಟಿಯ ಅಗತ್ಯತೆಯಿದೆ ಎಂದು ಅಧಿಕಾರಿಗಳು ವಿಚಾರವನ್ನು ಸಭೆಯ ಮುಂದಿಟ್ಟಿದ್ದಾರೆ.
ನೋಟಿಸ್ ಜಾರಿ : ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಉಡುಪಿ ಮತ್ತು ಮಂಗಳೂರು ಜಿಲ್ಲೆಯ ಮಧ್ಯಭಾಗದಲ್ಲಿ ಮೂರು ಕಡೆ ಪರ್ಯಾಯ ಜಮೀನುಗಳನ್ನು ಗುರುತಿಸುವಂತೆ ಈಗಾಗಲೇ ತಹಶಿಲ್ದಾರುಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಗ್ರಾಮಸ್ಥರಲ್ಲಿ ಆತಂಕ : ಯಾವುದೋ ಕಂಪನಿ ಸರ್ವೆ ಕಾರ್ಯ ಮಾಡುತ್ತಿದೆ ಎಂದು ತಿಳಿದ ಆ ಪರಿಸರದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ತಾವು ನೆಲೆ ಕಂಡುಕೊಂಡಿರುವ ಪಿತ್ರಾರ್ಜಿತ , ಸ್ವಯಾರ್ಜಿತ ಭೂಮಿ ಯಾರ ಪಾಲಾಗುವುದೋ ಎಂಬ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಸ್ಪಷ್ಟ ಮಾಹಿತಿ ನೀಡುವಂತೆ ಆಗ್ರಹಿಸಿದ್ದಾರೆ. ಇನ್ನುಳಿದಂತೆ ರಾಜ್ಯದ ಮೈಸೂರು , ಬೆಳಗಾಂ, ವಿಜಯಪುರ, ಕಲ್ಬುರ್ಗಿ , ವಿದ್ಯಾನಗರಗಳಲ್ಲೂ ವಿಮಾನ ನಿಲ್ದಾಣ ಮಾಡುವ ಬಗ್ಗೆ ಪ್ರಸ್ತಾಪಗಳಿವೆ ಎನ್ನಲಾಗಿದೆ. ಒಟ್ಟಿನಲ್ಲಿ ಇನ್ನಾ ಗ್ರಾಮದಲ್ಲಿ ವಿಮಾನ ನಿಲ್ದಾಣ ಆಗುತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಈ ಭಾಗದ ಗ್ರಾಮಸ್ಥರಲ್ಲಿ ಮಾತ್ರ ಜಾಗ ಕಳೆದುಕೊಳ್ಳುವ ಆತಂಕ ಮನೆ ಮಾಡಿದೆ.