ಬಂಟ್ವಾಳ ಡಿ 13: ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನಡೆದ ’ಸಾಮರಸ್ಯದೆಡೆಗೆ ಸೌಹಾರ್ದ ನಡಿಗೆ’ ಕಾರ್ಯಕ್ರಮಕ್ಕೆ ಶುಭ ಕೋರುವ ಹಾಗೂ ಕಾರ್ಯಕ್ರಮಕ್ಕೆ ಆಗಮಿಸುವ ಹಲವು ಸಚಿವರ ಸಹಿತ ಹಲವು ಕಾಂಗ್ರೆಸ್ ನಾಯಕರ ಪೋಟೋ ಗಳನ್ನು ಬಳಸಿ ಬ್ಯಾನರ್ ನ್ನು ಬಿ.ಸಿರೋಡಿನ ಸರ್ಕಲ್ ಬಳಿಯಲ್ಲಿ ಹಾಕಲಾಗಿತ್ತು. ಆದರೆ ಡಿ. ೧೨ ರಂದು ಕಾರ್ಯ ಕ್ರಮ ಆರಂಭವಾಗುವ ಮೊದಲು ರಾತ್ರಿ ವೇಳೆ ಯಾರೋ ಕಿಡಿಗೇಡಿಗಳು ಬ್ಯಾನರ್ ನ್ನು ಹರಿದು ಹಾಕಿದ್ದರು.
ಹೀಗಾಗಿ ಸಿಟ್ಟಿಗೆದ್ದ ಕಾಂಗ್ರೆಸ್ ಅಭಿಮಾನಿಗಳು ಇಂದು ಅದೇ ಜಾಗದಲ್ಲಿ ಬ್ಯಾನರ್ ನ್ನು ವಿರೂಪಗೊಳಿಸಿದವರಿಗೆ ಶ್ರದ್ಧಾಂಜಲಿ ಅರ್ಪಿಸುವ ಬ್ಯಾನರ್ ಹಾಕಿದ್ದಾರೆ. " ಬ್ಯಾನರ್ ಹರಿದು ಹಾಕಿದ ಕಿಡಿಗೇಡಿಗಳಿಗೆ ಮತ್ತು ಅವರ ಮನೆಯವರಿಗೆ ದೇವರು ಇವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ" ಎಂದು ಬರೆಯಲಾಗಿದೆ. ಈ ವಿಚಾರ ಈಗ ಹಲವು ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಈ ಹಿಂದೆ ಬಿ.ಸಿ ರೋಡಿನಲ್ಲಿ ಬ್ಯಾನರ್ ಹರಿದ ಕಾರಣಕ್ಕಾಗಿ ಗಲಾಟೆ ಗಳು ನಡೆದ ಉದಾಹರಣೆಗಳು ಇವೆ. ಈ ಬಗ್ಗೆ ಪುರಸಭೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದೆ ಇರೋದ್ರಿಂದ ಮತ್ತೆ ಮತ್ತೆ ಇಂತಹ ಪ್ರಕರಣಗಳು ಹೆಚ್ಚಾಗಲು ಕಾರಣ ಗಳಾಗುತ್ತಿವೆ ಎಂದು ಆರೋಪಗಳು ಕೇಳಿ ಬರುತ್ತಿದೆ. ಇಂತಹ ಬ್ಯಾನರ್ ಗಳನ್ನು ಹಾಕಲು ಪುರಸಭೆ ಅನುಮತಿ ನೀಡುವುದು ಯಾಕೆ ಮತ್ತು ಅನುಮತಿ ಇಲ್ಲದ ಬ್ಯಾನರ್ ಗಳನ್ನು ಅಳವಡಿಸಲು ಇಲಾಖೆ ಅವಕಾಶ ನೀಡಬಾರದು. ಬ್ಯಾನರ್ ಹರಿದವರನ್ನು ಪೋಲಿಸ್ ಇಲಾಖೆ ಪತ್ತೆ ಹಚ್ಚಿ ಶಿಕ್ಷೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.