ಕಾರ್ಕಳ, ಜು 16 (Daijiworld News/MSP): ಅಕ್ರಮ ಚಟುವಟಿಕೆಯಿಂದ ದೂರ ಉಳಿಯದೇ ಹೋದಲ್ಲಿ ಗೂಂಡಾ ಕಾಯಿದೆ ಎದುರಿಸಿ. ಗುರುತು ಸಿಗಬಾರದೆಂಬ ಕಾರಣಕ್ಕಾಗಿ ಎಲ್ಲಿಂದಲ್ಲೋ ಬಂದು ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅಂತವರ ಗುರುತು ಪತ್ತೆ ಹಚ್ಚುವಲ್ಲಿ ಇಲಾಖೆ ಶಕ್ತವಾಗಿದೆ. ಶಾಂತಿ ಸೌಹಾರ್ದ ಕಾಪಾಡುವ ಮೂಲಕ ಭಾರತೀಯ ಕಾನೂನನ್ನು ಗೌರವಿಸಿ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ ಎಚ್ಚರಿಕೆ ನೀಡಿದರು.
ಕಾರ್ಕಳ, ಕಾಪು ವೃತ್ತನಿರೀಕ್ಷಕ ವ್ಯಾಪ್ತಿಯ ಏಳು ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮ ಜಾನುವಾರು ಸಾಗಾಟ, ಅಕ್ರಮ ಕಸಾಯಿಖಾನೆ, ಜಾನುವಾರು ಕಳವು ಸೇರಿದಂತೆ ವಿವಿಧ ಕೃತ್ಯದಲ್ಲಿ ಭಾಗಿಯಾಗಿದ್ದ 65 ಮಂದಿ ಆರೋಪಿಗಳ ಪೆರೇಡ್ ಕಾರ್ಯವು ಕಾರ್ಕಳ ಎಎಸ್ಪಿ ಕಚೇರಿಯ ಹೊರಾಂಗಣದಲ್ಲಿ ನಡೆದಿದ್ದು, ಅದರಲ್ಲಿ ಪಾಲ್ಗೊಂಡ ಅವರು ಕಠಿಣ ಸಂದೇಶವನ್ನು ನೀಡಿದ್ದರು.
ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಹಾಲ್ ಮೂರ್ತಿ ರಾವ್, ನಗರ ಠಾಣಾಧಿಕಾರಿ ನಂಜಾ ನಾಯಕ್, ಪಡುಬಿದ್ರಿ ಠಾಣಾಧಿಕಾರಿ ಸುಬ್ಬಣ್ಣ, ಶಿರ್ವ ಠಾಣಾಧಿಕಾರಿ ಅಬ್ದುಲ್ಖಾದರ್, ಕಾಪು ಠಾಣಾಧಿಖಾರಿ ಕೆ.ಜಯ, ಹೆಬ್ರಿ ಠಾಣಾಧಿಖಾರಿ ಮಹಾಬಲೇಶ್ವರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ವಿವಿಧ ಕೃತ್ಯದಲ್ಲಿ ಭಾಗಿಯಾದವರು :
ಅಕ್ರಮ ಜಾನುವಾರು ಸಾಕಾಟ, ಅಕ್ರಮ ಜಾನುವಾರು ವಧೆ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ ಕೆಲವರು ವಿವಿಧ ಸ್ತರ ಕ್ರಿಮಿನಲ್ ಕೃತ್ಯದಲ್ಲಿ ತೊಡಗಿಸಿಕೊಂಡಿರುವ ಮಾಹಿತಿಯು ಇದೇ ಸಂದರ್ಭದಲ್ಲಿ ಕಲೆ ಹಾಕಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಅವರು, ಅಂತಹ ಆರೋಪಿಗಳ ಪೂರ್ಣ ವಿವರಗಳನ್ನು ಪ್ರತ್ಯೇಕವಾಗಿ ದಾಖಲಿಸುವಂತೆ ಠಾಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಾಕಾಲಾಗದೇ ಜಾನುವಾರು ನೀಡಿ ಆರೋಪಿಗಳಾದರು!
ಕೆಲ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರಾಗಿದ್ದು, ಜಾನುವಾರುಗಳನ್ನು ಸಾಕಾಲಾಗದೇ ಕೆಲವರಿಗೆ ಉದಾರವಾಗಿ ನೀಡಿದ್ದರು. ಆದರೆ ಆ ಜಾನುವಾರುಗಳು ಅಕ್ರಮ ದಂಧೆಕೋರರ ಪಾಲಾಗಿದ್ದು, ಇವರು ಆರೋಪಿಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಬೇಕಾಯಿತು.
ಪ್ರಾರ್ಥನೆ ತೆರಳುವವರು ಆರೋಪಿಗಳು!
ಜಾನುವಾರು ಕಳವು ಪ್ರಕರಣ ವ್ಯಾಪಕವಾಗಿದ್ದ ಆ ದಿನಗಳಲ್ಲಿ ಕಾಪು ಠಾಣಾ ವ್ಯಾಪ್ತಿಯಲ್ಲಿ ಸಹೋದರಿಬ್ಬರು ನಸುಕಿನ ಜಾವದಲ್ಲಿ ಎಂದಿನಂತೆ ಪ್ರಾರ್ಥನೆಗೆ ತೆರಳುತ್ತಿದ್ದರು. ನಾಕಾಬಂಧಿಯಲ್ಲಿದ್ದ ಪೊಲೀಸರ ತನಿಖೆಯ ಸಮರ್ಪಕವಾಗಿ ಉತ್ತರಿಸದೇ ಅವರಿಬ್ಬರು ಆರೋಪಿಯ ಸ್ಥಾನದಲ್ಲಿ ನಿಲ್ಲಬೇಕಾದ ಪ್ರಸಂಗ ಎದುರಾಗಿತ್ತು ಎಂದು ಆರೋಪಿಗಳ ತಂದೆ ಪೊಲೀಸ್ ಅಧಿಕಾರಿಯ ಮುಂದಿಟ್ಟು ಕಣ್ಣೀರಿಟ್ಟ ಪ್ರಸಂಗ ನಡೆದಿದೆ.
ಅಪರಾಧಿಗಳ ಮನಪರಿವರ್ತನೆ ಇಲಾಖೆಯ ಉದ್ದೇಶ -ಕೃಷ್ಣಕಾಂತ್ ಎಎಸ್ಪಿ ಕಾರ್ಕಳ
ಅಪರಾಧಗಳನ್ನು ಮಟ್ಟ ಹಾಕುವುದಕ್ಕೆ ಇಲಾಖೆಯು ಎಲ್ಲಾ ರೀತಿಯಲ್ಲಿ ಸನ್ನದ್ಧವಾಗಿದೆ. ಅಪರಾಧದಲ್ಲಿ ತೊಡಗಿಸಿಕೊಂಡವರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಪ್ರತಿದಿನ ಅವರ ಚಲನವಲನ ಹಾಗೂ ಅವರ ಬಳಸಲಾಗುತ್ತಿರುವ ಮೊಬೈಲ್, ಕರೆಗಳ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಪೆರೇಡ್ ಮೂಲಕ ಕಾನೂನು ಅರಿವು ನೀಡಲಾಗುತ್ತಿದೆ. ಕೃತ್ಯಕ್ಕೆ ಕಡಿವಾಣ ಹಾಕಲು ಪೊಲೀಸ್ ಚೆಕ್ಪೋಸ್ಟ್ಗಳಲ್ಲಿ 24 ಗಂಟೆಯೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಕಾರ್ಕಳ ಎಎಸ್ಪಿ ಕೃಷ್ಣಕಾಂತ್ ತಿಳಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಜಾನುವಾರು ಬಿಟ್ಟರೆ ಕ್ರಮ
ಸಾರ್ವಜನಿಕ ಸ್ಥಳಗಳಲ್ಲಿ ಜಾನುವಾರುಗಳನ್ನು ಬಿಟ್ಟರೆ ಕ್ರಮ ಕೈಗೊಳ್ಳುವುದಕ್ಕೆ ಇಲಾಖೆ ಮುಂದಾಗಲಿದೆ. ಅಲೆಮಾರಿ ಜಾನುವಾರು ಎಂದು ಗುರುತಿಸಿ ಅವುಗಳನ್ನು ದೊಡ್ಡಿಗಳಿಗೆ ಒಪ್ಪಿಸಲಾಗುವುದು. ಅದಕ್ಕಾಗಿ ಜಿಲ್ಲಾ ಪಂಚಾಯತ್ನ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದೆಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ತಿಳಿಸಿದರು.