ವರದಿ - ಅಹಮ್ಮದ್ ಬಾವ
ಮಂಗಳೂರು, ಜು13(Daijiworld News/SS): ತುಳು ಭಾಷೆ ಕರಾವಳಿಗರ ಪ್ರಮುಖ ಆಡುಭಾಷೆಗಳಲ್ಲಿ ಒಂದು. ತುಳುವರು ದೇಶ - ವಿದೇಶದಲ್ಲೂ ತಮ್ಮ ಪ್ರೌಢಿಮೆ, ಪ್ರತಿಭೆಯನ್ನು ಎತ್ತಿ ತೋರಿಸಿದ್ದಾರೆ. ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇಧಕ್ಕೆ ಸೇರ್ಪಡೆಗೊಳಿಸಲು ಅನೇಕ ಕಾರ್ಯಗಳು ಕರಾವಳಿಯಲ್ಲಿ ನಡೆಯುತ್ತಿರುವ ಸಮಯದಲ್ಲೇ ಇಲ್ಲೊಬ್ಬ ಪುಟ್ಟ ಬಾಲಕ ತುಳು ಭಾಷೆ, ಸಾಹಿತ್ಯದ ವಿಚಾರದಲ್ಲಿ ಪ್ರಪಂಚದಲ್ಲೇ ಇದೇ ಮೊದಲ ಬಾರಿಗೆ ವರ್ಲ್ಡ್ ರೆಕಾರ್ಡ್ ಬರೆದು ಅದ್ಭುತ ಸಾಧನೆ ಮಾಡಿದ್ದಾನೆ. ಅಂದ ಹಾಗೆ ಈ ಪುಟ್ಟ ಪ್ರತಿಭೆಯ ಹೆಸರು ತಕ್ಷಿಲ್ ಎಂ.ದೇವಾಡಿಗ.
ತಕ್ಷಿಲ್ ಎಂ.ದೇವಾಡಿಗ ಮೂಲತಃ ಮಂಗಳೂರಿನ ಕೊಂಚಾಡಿ ನಿವಾಸಿ ಕಿರಣಾ ಮತ್ತು ಮಹೇಶ್ ದಂಪತಿಯ ಪುತ್ರ. ವಯಸ್ಸು ಬರೀ 5 ವರ್ಷ. ಆದರೆ ಈತನಿಗೆ ಒಲಿದಿರುವ ಪ್ರತಿಭೆ ವಯಸ್ಸನ್ನು ಮೀರಿಸುವಂಥಹದ್ದು. ತುಳುವಿನಲ್ಲಿ ಅರಳು ಹುರಿದಂತೆ ಮಾತನಾಡುವ ಈ ಪುಟ್ಟ ಬಾಲಕ ಪಾರ್ದನ, ಬಲಿಂದ್ರ ನಾಮ ಹೇಳಿದರೆ ಸಾಕು ಎಂಥವರಾದರೂ ಸರಿ ಮನಸೋಲಲೇಬೇಕು.
ತುಳುನಾಡಿನ ಸಮಗ್ರ ಸಂಸ್ಕೃತಿ, ಚರಿತ್ರೆ ಎಲ್ಲವನ್ನೂ ಬಹಳ ಅದ್ಭುತವಾಗಿ ಪಾಡ್ದನದಲ್ಲಿ ಕಟ್ಟಿ ಹೇಳುವ ಮೂಲಕ ಈತ ಇಡೀ ಪ್ರಪಂಚವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನುವಂತೆ ಈತ ತನ್ನ ಐದರ ಪ್ರಾಯದಲ್ಲೇ ತುಳು ಸಾಹಿತ್ಯ, ಜನಪದ ಪಾರ್ದನ, ಬಲಿಂದ್ರ ಕರೆಯ ಬಗ್ಗೆ ಅಪಾರವಾದ ಜ್ಞಾನವನ್ನು ಇಟ್ಟುಕೊಂಡಿದ್ದಾನೆ. ತುಳು ಭಾಷೆಯ 31 ವಿವಿಧ ಮಜಲುಗಳ ಬಗ್ಗೆ ಅರಿವಿರುವ ಈ ಪ್ರತಿಭೆ ತುಳು ಭಾಷೆಯ ಸೌಂದರ್ಯವನ್ನು ಭಿತ್ತರಿಸಿ ಮೊದಲ ಬಾರಿಗೆ ತುಳು ಭಾಷೆಯಲ್ಲಿ ವರ್ಲ್ಡ್ ರೆಕಾರ್ಡ್ ಸೃಷ್ಟಿಸಿದ್ದಾನೆ.
ತುಳು ಭಾಷೆಯು ಸಂವಿಧಾನದ 8ನೇ ಪರಿಚ್ಛೇಧಕ್ಕೆ ಸೇರುವ ಮುನ್ನವೇ ಈ ಬಾಲಕ ವರ್ಲ್ಡ್ ರೆಕಾರ್ಡ್ ಬರೆದಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಮಾತ್ರವಲ್ಲ, ತುಳುನಾಡು ಮತ್ತು ತುಳುವರ ಸಂಭ್ರಮಕ್ಕೂ ಕಾರಣವಾಗಿದೆ. ತಕ್ಷಿಲ್ ಎಂ.ದೇವಾಡಿಗ ಅವರ ಈ ಎಲ್ಲಾ ಸಾಧನೆಯ ಹಿಂದೆ ಹೆತ್ತವರ ಪರಿಶ್ರಮವಿದೆ.