ಉಡುಪಿ, ಜು13(Daijiworld News/SS): ಇಲ್ಲಿನ ಯಡಮೊಗ್ಗೆ ಗ್ರಾಮದ ಕುಮ್ಟಿಬೇರಿನಲ್ಲಿ ಕೌಟುಂಬಿಕ ಕಲಹದಿಂದ ಮನನೊಂದು ಮುಗ್ಧ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿ, ತನ್ನ ಒಂದು ವರ್ಷ ಮೂರು ತಿಂಗಳ ಹೆಣ್ಣು ಮಗುವಿನ ಸಾವಿಗೆ ಕಾರಣರಾದ ತಾಯಿ ರೇಖಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ಪೊಲೀಸರು ನುರಿತ ಮನೋ ವೈದ್ಯರಿಂದ ರೇಖಾ ಅವರನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿದ್ದಾರೆ. ಆಕೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ವೈದ್ಯರ ಸಲಹೆ ಮೇರೆಗೆ ಸೂಕ್ತ ಚಿಕಿತ್ಸೆಗಾಗಿ ದೊಡ್ಡಣಗುಡ್ಡೆಯ ಡಾ.ಎ.ವಿ. ಬಾಳಿಗಾ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಮಗುವಿನ ಮೃತದೇಹ ಸಿಕ್ಕ ಬಳಿಕ ಆಕೆ ಕೊಟ್ಟ ಹೇಳಿಕೆಯಂತೆ ಕಲಂ 302 (ಕೊಲೆ), 307 (ಕೊಲೆಯತ್ನ) ಮತ್ತು ಆತ್ಮಹತ್ಯೆ ಯತ್ನ ಪ್ರಕರಣವನ್ನು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ.
ಚಿಕಿತ್ಸೆ ಪೂರ್ಣಗೊಂಡ ಬಳಿಕ ತನಿಖೆ ಮುಂದುವರಿಸಲಾಗುವುದು. ಪ್ರಾಮಾಣಿಕ ಹಾಗೂ ನಿಪಕ್ಷಪಾತ ತನಿಖೆಗಾಗಿ ಕುಂದಾಪುರ ಡಿವೈಎಸ್ಪಿ ಬಿ.ಪಿ. ದಿನೇಶ್ ಅವರನ್ನು ತನಿಖಾಧಿಕಾರಿಯಾಗಿ ನಿಯೋಜಿಸಲಾಗಿದೆ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.