ಬೆಳ್ತಂಗಡಿ,ಜು 13 (Daijiworld News/MSP): ಮಹಾರಾಷ್ಟ್ರ ಕೊಲ್ಲಾಪುರದಿಂದ ಕೇರಳದ ಕಾಸರಗೋಡಿಗೆ ಮಾಂಸಕ್ಕಾಗಿ ಸಾಗಾಟ ಮಾಡುತ್ತಿದ್ದ 15 ಕೋಣ, 2 ಎಮ್ಮೆಗಳನ್ನು ಬಂಟ್ವಾಳ ಉಪವಿಭಾಗದ ಎಎಸ್ಪಿ ಸೈದುಲ್ಲಾ ಅದಾವತ್ ನೇತೃತ್ವದಲ್ಲಿ ಪಣಕಜೆ ಬಳಿ ಸಬರಬೈಲು ಎಂಬಲ್ಲಿ ಶನಿವಾರ ಮುಂಜಾನೆ ಪತ್ತೆಹಚ್ಚಿ 7 ಜನರನ್ನು ಬಂಧಿಸಿ 2 ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಂಟೈನರ್ ವಾಹನದ ಚಾಲಕ ವೇಣೂರು ಮೂಡುಕೋಡಿ ನಿವಾಸಿ ಹೈದರ್(39) ಸಹಚಾಲಕ ಕಾಸರಗೊಡು ಆಲಂಬಾಡಿ ನಿವಾಸಿ ಅಬ್ದುಲ್ ರಹಿಮಾನ್ (34), ಹಾಸನ ಬೇಲೂರು ನಿವಾಸಿ ಮಂಜೇಗೌಡ (35), ಕಾಸರಗೋಡು ವಿದ್ಯಾನಗರದ ನಿವಾಸಿ ಬಾಬು (58), ಹಾಗು ಲಾರಿಗೆ ಬೆಂಗಾವಲಾಗಿ ಆಲ್ಟೋ ಕಾರ್ನಲ್ಲಿ ಹೋಗುತ್ತಿದ್ದ ಕಾಸರಗೋಡು ನಿವಾಸಿ ಅಬ್ದುಲ್ ರಹಿಮಾನ್ (20), ಕಾಸರಗೋಡು ಆಲಂಬಾಡಿ ನಿವಾಸಿ ಮಹಮ್ಮದ್ ಮುಸ್ತಾಫ (20), ಇದರ ಚಾಲಕ ಕಾಸರಗೋಡು ಅಂಲಂಬಾಡಿ ನಿವಾಸಿ ಮಹಮ್ಮದ್ ಅಕ್ಬರ್ (27) ಎಂಬುವರೇ ಬಂಧಿತರು. ಸುಮಾರು 9 ಲಕ್ಷ ರೂ ಮೌಲ್ಯದ ವಾಹನ ಮತ್ತು ಸುಮಾರು 15 ಲಕ್ಷ ರೂ ಬೆಲೆಬಾಳುವ ಎಮ್ಮೆ ಹಾಗೂ ಕೋಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಇದೊಂದು ವೃತ್ತಿಪರ ನಿರತ ತಂಡದ ಕೃತ್ಯವಾಗಿದ್ದು ಮಹಾರಾಷ್ಟ್ರದಲ್ಲಿ ಕೆ.ಜಿ ಒಂದಕ್ಕೆ 80 ರೂ.ಗಳಿಗೆ ಖರೀದಿಸಿ ಕೇರಳ ಕಾಸರಗೋಡುಗಳಲ್ಲಿ 450 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ. ಕಳೆದ ತಿಂಗಳು ಉಡುಪಿ ಪ್ರದೇಶದಲ್ಲಿ ಇಂತಹದೇ ಸಾಗಾಟ ಪ್ರಕರಣವನ್ನು ಪತ್ತೆಹಚ್ಚಿದ ಬಳಿಕ ಇದೀಗ ಬೇರೆ ರಸ್ತೆಯನ್ನು ಬಳಸಿ ಸಾಗಾಟ ಮಾಡುತ್ತಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸ್ಫೆಕ್ಟರ್ ಸಂದೇಶ ಪಿ.ಜಿ ಬೆಳ್ತಂಗಡಿ ಎಸೈ ರವಿ ಬಿ.ಎಸ್, ಧರ್ಮಸ್ಥಳ ಪೋಲೀಸ್ ಠಾಣಾ ಎಸ್ಐ ಅವಿನಾಶ್ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
ಖಂಡನೆ ಮತ್ತು ಅಭಿನಂದನೆ
ಬೆಳಗ್ಗಿನ ಜಾವ ಸುಮಾರು 4 ಗಂಟೆಯ ಹೊತ್ತಿಗೆ ಬೆಳ್ತಂಗಡಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ದನ ಕಳ್ಳಸಾಗಾಟದ ವಾಹನವನ್ನು ಬೆಳ್ತಂಗಡಿ ಠಾಣೆ ವ್ಯಾಪ್ತಿಯ ಪೋಲಿಸರು ಜಪ್ತಿ ಮಾಡಿದ್ದು ಈ ವಾಹನದಲ್ಲಿ 17 ಎಮ್ಮೆಗಳು ಮತ್ತು ಕೋಣಗಳು ಪತ್ತೆಯಾಗಿರುತ್ತದೆ.ಈ ವಾಹನವು ಮಹಾರಾಷ್ಟ್ರ ಗಡಿ ವ್ಯಾಪ್ತಿಯಿಂದ ಬೆಳ್ತಂಗಡಿಯ ಪೋಟ್ಟು ಕೆರೆ ಕಸಾಯಿ ಖಾನೆಗೆ ದನಗಳನ್ನು ಸಾಗಿಸುತ್ತಿರುವ ಮಾಹಿತಿ ಲಭ್ಯವಾಗಿವೆ. ಬಂಧನವಾದ ಒಬ್ಬ ವ್ಯಕ್ತಿ ಗುರುವಾನೆಕೆರೆಯನೆಂದು ತಿಳಿದು ಬಂದಿರುತ್ತದೆ. ಸ್ಥಳೀಯ ಮುಸ್ಲಿಮರು ಠಾಣೆ ಬಳಿ ಜಮಾಯಿಸಿ ದನಗಳ ಬಿಡುಗಡೆಗೆ ಒತ್ತಡ ಹಾಕುತ್ತಿರುವ ಬಗ್ಗೆ ತಿಳಿದು ಬಂದಿರುತ್ತದೆ.ಈ ಎಲ್ಲಾ ಘಟನೆಗಳನ್ನು ನೋಡಿದಾಗ ಇನ್ನೂ ಕೂಡ ದನಕಳ್ಳ ಸಾಗಟನೆಕಾರರು ಸಕ್ರಿಯವಾಗಿರುವುದು ಮತ್ತು ಒಂದು ಸಮಾಜ ಈ ಕಳ್ಳರಿಗೇ ಬೆಂಬಲವಾಗಿ ನಿಂತಿರುವುದನ್ನು ತಾಲೂಕು ವಿಶ್ವಹಿಂದೂ ಪರಿಷತ್ ಭಜರಂಗದಳ ತೀವ್ರವಾಗಿ ಖಂಡಿಸಿದೆಯಲ್ಲದೆ ಮತ್ತು ದನ ಹಿಡಿಯಲು ಸಹಕರಿಸಿದ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದೆ.