ಕುಂದಾಪುರ, ಜು 13 (Daijiworld News/MSP): ಕೃಷಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಬೇಕು. ಎಳವೆಯಲ್ಲಿಯೇ ಮಕ್ಕಳಲ್ಲಿ ಕೃಷಿಯ ಬಗ್ಗೆ ಸಹಜ ಕುತೂಹಲ, ಅರಿವು ಮೂಡಿಸಿದರೆ ಮುಂದೆ ಭವಿಷ್ಯದಲ್ಲಿ ಅವರು ಕೃಷಿಯನ್ನು ಪ್ರೀತಿಸುತ್ತಾರೆ. ಅಭಿಮಾನ ಹೊಂದುತ್ತಾರೆ. ಪುಸ್ತಕದ ಸಿದ್ಧ ಪಾಠಗಳ ಜೊತೆಯಲ್ಲಿ ಕ್ಷೇತ್ರ ಅಧ್ಯಯನ, ಪ್ರಾತ್ಯಕ್ಷಿಕವಾದ ಅನುಭವ ಪರಿಣಾಮಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿನ ವಿದ್ಯಾರ್ಥಿಗಳು ಜು.10ರಂದು ವಂಡ್ಸೆ ಸಮೀಪದ ಕಲ್ಮಾಡಿಯ ನಾಟಿ ಗದ್ದೆಯಲ್ಲಿ ನೇಜಿ ನಾಟಿ ಮಾಡುವ ಮೂಲಕ ಸಂಭ್ರಮಿಸಿದರು.
ವಂಡ್ಸೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀನಿವಾಸ ಪೂಜಾರಿಯವರ ಗದ್ದೆಯಲ್ಲಿ ನಡೆದ ನಾಟಿ ಕಾರ್ಯದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ತಾವು ಕೂಡಾ ನಾಟಿ ನಿರತ ಕಾರ್ಮಿಕರ ಜೊತೆಯಲ್ಲಿ ನೋಡಿ ಕಲಿಯುತ್ತಾ, ಕೇಳಿ ತಿಳಿಯುತ್ತಾ ನೇಜಿಯನ್ನು ನೆಟ್ಟು ವಿಶಿಷ್ಟ ಅನುಭೂತಿ ಪಡೆದರು.
’ಸೀನ ಸೆಟ್ಟರು ನಮ್ಮ ಟೀಚರ್’ ಎಂಬ ಅಧ್ಯಾಯ 7ನೇ ತರಗತಿಯ ಪಠ್ಯದಲ್ಲಿ ಅಳವಡಿಸಲಾಗಿದೆ. ಬೇಸಾಯದ ವಿವಿಧ ಪ್ರಕಾರಗಳನ್ನು ಈ ಅಧ್ಯಾಯದಲ್ಲಿ ತಿಳಿಸಲಾಗಿದ್ದು, ಅವುಗಳಲ್ಲಿ ಒಂದಾದ ನಾಟಿ ಮಾಡುವ ಕಲೆಯನ್ನು ಪ್ರಾತ್ಯಕ್ಷಿಕೆ ಮೂಲಕವೇ ವಿದ್ಯಾರ್ಥಿಗಳಿಗೆ ಬೋಧಿಸಿದ್ದು ಗಮನ ಸಳೆಯಿತು.
ಇವತ್ತು ಭತ್ತ ಬೇಸಾಯ ಕ್ಷೀಣಿಸಿದೆ. ಬೇಸಾಯದ ಬಗ್ಗೆಯೇ ವಿದ್ಯಾರ್ಥಿಗಳಿಗೆ ಕನಿಷ್ಠ ಜ್ಞಾನವೂ ಸಿಗುತ್ತಿಲ್ಲ. ಅನ್ನ ಎಲ್ಲಿಂದ ಬರುತ್ತದೆ? ಎನ್ನುವ ಸ್ಪಷ್ಟತೆಯೂ ಕೂಡಾ ಲಭಿಸುತ್ತಿಲ್ಲ. ಈ ನಡುವೆ ವಿದ್ಯಾರ್ಥಿಗಳಲ್ಲಿ ಕೃಷಿ ಆಸಕ್ತಿ ಮೂಡಿಸಬೇಕು ಎನ್ನುವ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ. ಕೆಲವೊಂದು ವಿದ್ಯಾಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳನ್ನು ಕೃಷಿ ತಾಕುಗಳಿಗೆ ಕರೆದುಕೊಂಡು ಹೋಗಿ ಸ್ಥಳದಲ್ಲಿಯೇ ಪ್ರಾಯೋಗಿಕ ಮಾಹಿತಿ ನೀಡುತ್ತಾರೆ. ಅಂತೆಯೇ ವಂಡ್ಸೆ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಆಶಾ ಅವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ರಾಜು ಎನ್. ಮತ್ತು ಸಹಶಿಕ್ಷಕಿ ರೇವತಿ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳ ತಂಡ ಕೆಸರು ಗದ್ದೆಯಲ್ಲಿ ನಾಟಿ ಮಾಡಿ ಭತ್ತದ ಸಸಿ, ನಾಟಿ ಪ್ರಕ್ರಿಯೆ, ಕೆಸರು ಮಣ್ಣು ಇತ್ಯಾದಿ ಪ್ರತ್ಯೆಕ್ಷ ಅನುಭವಗಳನ್ನು ಚಿತ್ತಬುತ್ತಿಯಲ್ಲಿ ಅಚ್ಚೋತ್ತಿಸಿಕೊಂಡರು.
ಉಳುಮೆ ಮಾಡಿ ಹದ ನೀರು ನಿಂತ ಸಾವಭರಿತ ಕೆಸರು ಗದ್ದೆಯಲ್ಲಿ ಸಾಲುಗಳ ಪ್ರಕಾರವಾಗಿ ಸಸಿಯಿಂದ ಸಸಿಗೆ ಅಂತರ ಕೊಟ್ಟು ಮಕ್ಕಳು ನಾಟಿ ಮಾಡಿದರು. ನೇಜಿ ಕಟ್ಟುಗಳನ್ನು ಬಿಚ್ಚಿ, ಹಿಡಿಪು (ಸಸಿಗಳ ಗುಂಪು) ಮಾಡಿ ಕೆಸರಿನಲ್ಲಿ ನೆಟ್ಟರು. ಯಾವ ರೀತಿ ನಾಟಿ ಮಾಡಬೇಕು, ಸಸಿಯ ಎಷ್ಟು ಭಾಗವನ್ನು ಕೆಸರಿನಲ್ಲಿ ಇಡಬೇಕು, ಮುಷ್ಟಿಯಿಂದ ಸಸಿಗಳನ್ನು ತಗೆದುಕೊಳ್ಳುವುದು ಹೇಗೆ? ಅಂತರ ಕೊಡುವುದರ ಪ್ರಾಮುಖ್ಯತೆ, ನೇಜಿಯ ಬೆಳವಣಿಗೆ, ಸಸ್ಯ ಸಂರಕ್ಷಣೆ ಇತ್ಯಾದಿಗಳ ಬಗ್ಗೆ ಶ್ರೀನಿವಾಸ ಪೂಜಾರಿ ಅವರು ಮಾಹಿತಿ ನೀಡಿದರು.
ಒಂದಿಷ್ಟು ಹೊತ್ತು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡ ಮಕ್ಕಳು ಅನ್ನದಾತನಿಗೆ ಜಯಘೋಷ ಹಾಕಿ, ಈ ಬಾರಿ ದೇಶದಲ್ಲಿ ಉತ್ತಮ ಮಳೆ ಆಗಿ ಉತ್ತಮ ಬೆಳೆ ಬರಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ ಎ.ಜಿ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂದೇಶ ಶೆಟ್ಟಿ ಅಡಿಕೆಕೊಡ್ಲು, ಸಿವಿಲ್ ಗುತ್ತಿಗೆದಾರರಾದ ರುದ್ರಯ್ಯ ಆಚಾರ್ಯ, ಎಸ್.ಡಿ.ಎಂ.ಸಿ ಸದಸ್ಯ ಶೇಖರ, ಮಾತೃಭೂಮಿ ಯುವ ಸಂಘಟನೆಯ ಮಾಜಿ ಅಧ್ಯಕ್ಷ ರಮೇಶ ಪೂಜಾರಿ, ಚಂದ್ರ ಪೂಜಾರಿ ಕಲ್ಮಾಡಿ, ಶಾಲಾ ವಾಹನ ಚಾಲಕ ರವಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.