ಮಂಗಳೂರು, ಜು 13 (Daijiworld News/MSP): ನಗರದಲ್ಲಿ ಹಾಸ್ಟೆಲ್, ಪೇಯಿಂಗ್ ಗೆಸ್ಟ್, ಸರ್ವಿಸ್ ಅಪಾರ್ಟ್ಮೆಂಟ್ ನಡೆಸುವವರು ಇನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಿ ಕೊಳ್ಳಬೇಕು. ಇವುಗಳಲ್ಲಿ ಬಾಡಿಗೆಗೆ ವಾಸಿಸುವ ನಿವಾಸಿಗಳು ಕೂಡ ತಮ್ಮ ಗುರುತಿನ ಪೂರ್ಣ ವಿವರಗಳನ್ನು ಸಂಬಂಧಪಟ್ಟವರಿಗೆ ನೀಡಬೇಕು ಎಂಬುದಾಗಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ಮಂಗಳೂರಿಗೆ ಹೊರ ಜಿಲ್ಲೆ ಮತ್ತು ದೇಶ, ವಿದೇಶಗಳಿಂದ ವಿದ್ಯಾರ್ಥಿಗಳು ಮತ್ತು ಜನರು ಬಂದು ಹಾಸ್ಟೆಲ್, ಪೇಯಿಂಗ್ ಗೆಸ್ಟ್, ಸರ್ವಿಸ್ ಅಪಾರ್ಟ್ ಮೆಂಟ್ ಮತ್ತು ಶಿಕ್ಷಣ ಸಂಸ್ಥೆಗಳ ವಸತಿಗೃಹಗಳಲ್ಲಿ ವಾಸ್ತವ್ಯವಿರುತ್ತಾರೆ. ಇತ್ತೀಚೆಗೆ ಡ್ರಗ್ಸ್ ಮಾಫಿಯಾ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚುತ್ತಿವೆ. ಇವುಗಳನ್ನು ನಿಯಂತ್ರಣಕ್ಕೆ ತರಲು ಈ ಆದೇಶ ಹೊರಡಿಸಲಾಗಿದೆ.
ಹಾಸ್ಟೆಲ್ , ಪೇಯಿಂಗ್ ಗೆಸ್ಟ್ ಮಾಲೀಕರು ತಮ್ಮ ಹೆಸರು ವಿಳಾಸ, ದೂರವಾಣಿ ಸಂಖ್ಯೆ, ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಸಲ್ಲಿಸಬೇಕು. ವಿದೇಶದ ವಿದ್ಯಾರ್ಥಿಗಳು ವಾಸ್ತವ್ಯವಿದ್ದಲ್ಲಿ ಇವರು ವಾಸ್ತವ್ಯಕ್ಕೆ ಬಂದ 15 ದಿನಗಳ ಒಳಗೆ ಅವರ ಪೂರ್ಣ ಮಾಹಿತಿಯೊಂದಿಯೊಂದಿಗೆ ಪಾಸ್ ಪೋರ್ಟ್ ಹಾಗೂ ಅವರು ಹೊಂದಿರುವ ವೀಸಾ ವಿವರ ಸಲ್ಲಿಸಬೇಕು ಎಂದು ಕಮಿಷನರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.