ಮಂಗಳೂರು, ಜು 13 (Daijiworld News/MSP): ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವಾಹನ ಪಾರ್ಕಿಂಗ್ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ಅಚಾನಕ್ ಆಗಿ ರಕ್ತದ ಕಲೆ ಕಂಡುಬಂದಿದ್ದು,ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಕಸ ಗುಡಿಸುವವರು ನ್ಯಾಯಾಲಯದ ಎದುರು ಪ್ರವೇಶ ದ್ವಾರದ ಬಳಿ ಇರುವ ವಾಹನ ಪಾರ್ಕಿಂಗ್ ಸ್ಥಳದಲ್ಲಿ ರಕ್ತ ಚೆಲ್ಲಿರುವುದನ್ನು ಮಧ್ಯಾಹ್ನ 2.30 ಗಂಟೆ ವೇಳೆಗೆ ನೋಡಿದ್ದಾರೆ. ಬಳಿಕ ಅಲ್ಲಿ ಅನುಮಾನಗೊಂಡು ಬಂದರು ಪೊಲೀಸ್ ಇನ್ಸ್ಟೆಕ್ಟರ್ಗೆ ಮಾಹಿತಿ ನೀಡಿದರು. ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ವಕೀಲರೋರ್ವರ ಸ್ಕಾರ್ಪಿಯೋ ವಾಹನದ ಮೇಲೂ ರಕ್ತ ಎರಚಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುತ್ತಮುತ್ತದ ಸುಮಾರು ೩೦ ಮೀಟರ್ ದೂರದಲ್ಲೂ ರಕ್ತದ ಕಲೆ ಕಂಡುಬಂದಿದೆ.
ಘಟನೆಯ ಕುರಿತು ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಆಗಮಿಸಿ ರಕ್ತದ ಮಾದರಿ ಸಂಗ್ರಹಿಸಿದ್ದು ಸಿಸಿಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಮೇಲ್ನೋಟಕ್ಕೆ ರಕ್ತ ಚೆಲ್ಲಿರುವ ರೀತಿಯನ್ನು ಗಮನಿಸಿದರೆ ತಲವಾರಿನಿಂದ ಕಡಿದು ಗಾಯಗೊಳಿಸಿದಂತೆ ಮೇಲ್ನೋಟಕ್ಕೆ ಕಂಡು ಬಂದಿದೆ.