ಉಡುಪಿ, ಜು13(Daijiworld News/SS): ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಳ್ಳತನ, ಗೋವುಗಳ ಕಳ್ಳತನ ಮತ್ತು ಅಕ್ರಮ ಸಾಗಾಟ ತಡೆಗೆ ಉಡುಪಿ ಜಿಲ್ಲೆಯಲ್ಲಿ ಹಗಲು 10 ಹಾಗೂ ರಾತ್ರಿ 30 ಚೆಕ್ಪೋಸ್ಟ್ ನಿರ್ಮಿಸಲಾಗಿದೆ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.
ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೋವುಗಳನ್ನು ಕದ್ದು ಅಕ್ರಮವಾಗಿ ಸಾಗಾಟ ಮಾಡುವ ಪ್ರಕರಣ ಹೆಚ್ಚಾಗುತ್ತಿದೆ. ಬೀದಿ ದನಗಳನ್ನು ಕಳ್ಳತನ ಮಾಡುವ ಯತ್ನಗಳು ನಿರಂತರ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಚೆಕ್ಪೋಸ್ಟ್ ನಿರ್ಮಿಸಲಾಗಿದೆ ಎಂದು ತಿಳಿಸಿದರು.
2017ರಲ್ಲಿ 7 ಪ್ರಕರಣಗಳಲ್ಲಿ 14 ದನಗಳ ಕಳ್ಳತನ, 2018ರಲ್ಲಿ 11 ಪ್ರಕರಣಗಳಲ್ಲಿ 20 ದನಗಳ ಕಳ್ಳತನ ಮತ್ತು 2019ರ ಜನವರಿಯಿಂದ ಜು. 11ರ ವರೆಗೆ 5 ಪ್ರಕರಣಗಳಲ್ಲಿ 11 ದನಗಳ ಕಳ್ಳತನ ನಡೆದಿದೆ. ಜೂನ್ ತಿಂಗಳಲ್ಲಿ ಮೂರು ಪ್ರಕರಣಗಳಲ್ಲಿ ಮೂವರ ಬಂಧಿಸಲಾಗಿದೆ. ಇದು ಸಾರ್ವಜನಿಕರು ನೀಡಿರುವ ದೂರಿನಂತೆ ದಾಖಲಾದ ಪ್ರಕರಣಗಳು. ಇದಲ್ಲದೆ ಪೊಲೀಸರು ಕೂಡ ಅಕ್ರಮ ದನ ಸಾಗಾಟ ಕುರಿತು ಸ್ವಯಂಪ್ರೇರಿತರಾಗಿ 2017ರಲ್ಲಿ 26 ಪ್ರಕರಣಗಳನ್ನು ದಾಖಲಿಸಿ 68 ಮಂದಿಯನ್ನು ಬಂಧಿಸಿದ್ದಾರೆ. 2018ರಲ್ಲಿ 31 ಪ್ರಕರಣಗಳಲ್ಲಿ 47 ಮಂದಿಯನ್ನು 2019ರಲ್ಲಿ 14 ಪ್ರಕರಣಗಳಲ್ಲಿ 31 ಮಂದಿಯನ್ನು ಬಂಧಿಸಿದ್ದಾರೆ ಎಂದು ಎಸ್ಪಿ ತಿಳಿಸಿದರು.
ಇದೇ ವೇಳೆ ಗಂಗೊಳ್ಳಿಯ ಗುಜ್ಜಾಡಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ದೂರಿಗೆ ತುರ್ತು ಕ್ರಮಕ್ಕೆ ಎಸ್ಪಿ ಸಂಬಂಧಿತ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಸಾಲಕ್ಕೆ ನೀಡಿದ ಚೆಕ್ ಬೌನ್ಸ್ ಹಿನ್ನೆಲೆಯಲ್ಲಿ ಬೆದರಿಕೆ ಕುರಿತ ದೂರಿಗೆ ಪೊಲೀಸ್ ಠಾಣೆಗೆ ದೂರು ನೀಡಲು ಎಸ್ಪಿ ಸೂಚಿಸಿದರು.
ಅಜ್ಜರಕಾಡು ಗಾಂಧಿ ಪಾರ್ಕ್ನಲ್ಲಿ ರಾತ್ರಿ ಡ್ರಿಂಕ್ಸ್ ಮಾಡುವವರ ಹಾವಳಿ, ಹಗಲು ಕಾಲೇಜಿಗೆ ತೆರಳದೆ ವಿದ್ಯಾರ್ಥಿನಿಯರು ಯುವಕರೊಂದಿಗೆ ಕಾಲ ಕಳೆಯುವ ಕುರಿತು ಕಾಲೇಜು ಮುಖ್ಯಸ್ಥರಿಗೆ ಮಾಹಿತಿ ನೀಡಿ ಸೂಕ್ತ ನಿಗಾ, ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಏಕಾಂಗಿ ಹಿರಿಯರಿಗೆ ರಕ್ಷಣೆ, ಜಂಕ್ಷನ್ಗಳಲ್ಲಿ ಸಿಸಿ ಟಿವಿ ಅಳವಡಿಕೆ, ವಿದ್ಯಾರ್ಥಿ ಸೇರಿದಂತೆ ಯುವಜನತೆ ಅತಿ ವೇಗದಿಂದ ದ್ವಿಚಕ್ರ ವಾಹನ ಚಲಾಯಿಸುವುದರ ವಿರುದ್ಧ ಉಡುಪಿ, ಮಣಿಪಾಲದಲ್ಲಿ ವಿಶೇಷ ಆಂದೋಲನಕ್ಕೆ ಎಸ್ಪಿ ಸೂಚಿಸಿದರು. ರಸ್ತೆ ನಿಯಮ ಪಾಲಿಸದೆ ಒಂದೆರಡು ನಿಮಿಷದ ಅನುಕೂಲಕ್ಕಾಗಿ ತಪ್ಪು ಹಾದಿಯಲ್ಲಿ ವಾಹನ ಚಲಾಯಿಸಬಾರದು ಎಂದು ತಿಳಿಸಿದರು.
ಚೇರ್ಕಾಡಿಯಲ್ಲಿ ಮಟ್ಕಾ, ಬಸ್ ತಂಗುದಾಣದ ಬಳಿಯ ವೆಲ್ಡಿಂಗ್ ಶಾಪ್ನಿಂದಾಗಿ ಬಸ್ ನಿಲುಗಡೆಗೆ ಸಮಸ್ಯೆ, ಮಂದಾರ್ತಿಯ ಅಂಗಡಿಯೊಂದರಲ್ಲಿ ಅಕ್ರಮ ಸಾರಾಯಿ ಮಾರಾಟ, ಬೆಳಗ್ಗಿನ ಜಾವವೇ ಬಾರಲ್ಲಿ ಮದ್ಯ ಮಾರಾಟ ಕುರಿತ ದೂರು ಕೇಳಿಬಂತು. ಜೊತೆಗೆ ಹಿರಿಯಡ್ಕದಲ್ಲಿ ಮಟ್ಕಾ, ಪ.ಪೂ. ಕಾಲೇಜಿನ ಆಯಕಟ್ಟಿನ ಪ್ರದೇಶದಲ್ಲಿ ತ್ಯಾಜ್ಯ, ನ್ಯಾಯಬೆಲೆ ಅಂಗಡಿಯಲ್ಲಿ ಅಸಮರ್ಪಕ ಸೇವೆ, ಮಣಿಪಾಲದಲ್ಲಿ ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್ನಿಂದಾದ ಸಮಸ್ಯೆ ಕುರಿತಂತೆ ಸಾರ್ವಜನಿಕರು ದೂರಿದರು.