ಕುಂದಾಪುರ, ಜು 11 (DaijiworldNews/SM): ಕುಂದಾಪುರ ತಾಲೂಕಿನ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಎಡಮೊಗ್ಗೆ ಕುಮ್ಟಿಬೇರು ಎಂಬಲ್ಲಿ ರಾತ್ರಿ ತಾಯಿ ಜತೆಯಲ್ಲಿ ಮಲಗಿದ್ದ ಎರಡು ಪುಟ್ಟ ಮಕ್ಕಳ ಪೈಕಿ ಒಂದು ವರ್ಷ ಮೂರು ತಿಂಗಳು ಹೆಣ್ಣು ಮಗುವನ್ನು ಗುರುವಾರ ಬೆಳಗ್ಗಿನ ಜಾವ ದುಷ್ಕರ್ಮಿಯೊಬ್ಬ ಕದ್ದೊಯ್ದಿದ್ದಾನೆ ಎನ್ನುವ ಪ್ರಕರಣ ತಿರುವು ಪಡೆದುಕೊಂಡಿದೆ. ಪುಟ್ಟ ಕಂದಮ್ಮ ಸಾನ್ವಿಕಾಳ ಮೃತದೇಹ ಮನೆಯಿಂದ ಸುಮಾರು 2 ಕಿ.ಮೀ. ದೂರದಲ್ಲಿ ಕುಬ್ಜಾ ನದಿಯಲ್ಲಿ ಪೊದೆಗಳ ನಡುವೆ ಪತ್ತೆಯಾಗುವ ಮೂಲಕ ಪ್ರಕರಣಕ್ಕೆ ಹೊಸ ತಿರುವು ಪಡೆದಿದೆ. ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ತನಿಖಾ ತಂಡ ರಚಿಸಿ ಕೂಲಂಕುಶ ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ.
ಹತ್ತು ಹಲವು ಸಂಶಯಕ್ಕೆ ಎಡೆ ಮಾಡಿಕೊಟ್ಟಿರುವ ಪ್ರಕರಣವನ್ನು ಗಂಭೀರವಾಗಿ ಕೈಗೆತ್ತಿಕೊಂಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರು ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್ ಅವರ ನೇತೃತ್ವದ ತನಿಖಾ ತಂಡ ರಚಿಸಿ, ತನಿಖೆಗೆ ಆದೇಶ ನೀಡಿದ್ದಾರೆ. ಸಾನ್ವಿಕಾಳ ತಾಯಿ ರೇಖಾ ನಾಯ್ಕ್ ಅವರ ಹೇಳಿಕೆಯಲ್ಲಿಯೇ ಮಗುವಿನ ಅಪರಣದ ನಾಟಕ ಎಂದು ಅನುಮಾನಗೊಂಡ ಪೊಲೀಸರಿಗೆ ಮಗುವಿನ ಮೃತ್ತ ದೇಹ ಸಿಗುತ್ತಿದ್ದಂತೆ ಅದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಲಿದ್ದಾರೆ. ತಾಯಿಯೇ ಮಗುವನ್ನು ಹತ್ಯೆ ನಡೆಸಿದ್ದಾರಾ? ಹೆಣ್ಣು ಮಗುವೆಂಬ ತಿರಸ್ಕಾರ ಭಾವ ಇತ್ತಾ? ಅಥವಾ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದರಾ? ಹೀಗೆ ಹತ್ತು ಹಲವು ರೀತಿಯ ಅನುಮಾನಗಳು ಕಾಡಲಾರಂಭಿಸಿದೆ.
ಇನ್ನು ಮಗುವಿನ ಕಿಡ್ನ್ಯಾಪ್ ನಡೆಸಿದವರು ಹೊಳೆಗೆ ಹಾರಿ ನಾಪತ್ತೆಯಾಗಿದ್ದಾರೆ ಎಂದು ಮಗುವಿನ ತಾಯಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ಹೊಳೆಯಲ್ಲಿ ಹುಡುಕಾಡಿದರು. ಆದರೆ ರಾತ್ರಿ ತನಕ ಮೃತ ದೇಹ ಪತ್ತೆಯಾಗಿರಲಿಲ್ಲ. ಸ್ಥಳೀಯ ಯುವಕರು ಈ ಪ್ರಕರಣದ ಬಗ್ಗೆ ಅನುಮಾನಗೊಂಡು ಶುಕ್ರವಾರ ಬೆಳಗ್ಗೆಯಿಂದಲೇ ಕಾರ್ಯಚರಣೆಗೆ ಇಳಿದಿದ್ದರು.
ಸಾನ್ವಿಕಾಳ ಮನೆಯಿಂದ ಹೊಳೆಯ ಬದಿಯಲ್ಲಿ ಹುಡುಕಾಟ ಆರಂಭಿಸಿದ್ದರು. ಸುಮಾರು 2 ಕಿ.ಮೀ ದೂರ ಹೊಳೆಯ ಬದಿಯಲ್ಲಿ ಹುಡುಕಾಟ ನಡೆಸುತ್ತ ಸಾಗುತ್ತಿರುವಾಗ, ಕುಬ್ಜಾ ನದಿಯ ಕಲ್ಲುಗುಂಡಿ ಬಳಿ ನದಿಯ ತಿರುವಿನಲ್ಲಿ ಪೊದೆಯ ಮಧ್ಯೆ ಮೃತ ದೇಹ ಪತ್ತೆಯಾಗಿದೆ. ಕೂಡಲೆ ಯುವಕರು ಶಂಕರನಾರಾಯಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮೃತ ದೇಹದ ಮಹಜರು ಮಾಡಿ, ಪೊಸ್ಟ್ಮಾರ್ಟಂ ಮಾಡಲು ಮಣಿಪಾಲದ ಆಸ್ಪತ್ರೆಗೆ ಸಾಗಿಸಿದ್ದಾರೆ.
ಪೊಸ್ಟ್ಮಾರ್ಟಂ ವರದಿಯನ್ನು ಆಧರಿಸಿ, ಮುಂದಿನ ತನಿಖೆಯನ್ನು ಕೈಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ತಾಯಿಯ ಪಾತ್ರ ಏನು ಎನ್ನುವುದರ ಮೇಲೆ ಅವರನ್ನು ವಶಕ್ಕೆ ಪಡೆಯುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಎಡಿಶನಲ್ ಎಸ್ಪಿ ಕುಮಾರಚಂದ್ರ ಅವರು ತಿಳಿಸಿದ್ದಾರೆ.