ಕುಂದಾಪುರ, ಜು 12 (Daijiworld News/MSP): ತನ್ನ ತಾಯಿಯ ಜೊತೆಗೆ ಮನೆಯಲ್ಲಿ ಮಲಗಿದ್ದಾಗ ಇಬ್ಬರು ದುಷ್ಕರ್ಮಿಯೊಬ್ಬ ಅಪಹರಿಸಲ್ಪಟ್ಟ ಒಂದುವರೆ ವರ್ಷದ ಹೆಣ್ಣು ಮಗುವಿನ ಮೃತದೇಹ, ಘಟನೆ ನಡೆದ ಮನೆಯಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಕುಬ್ಜಾ ನದಿಯಲ್ಲಿ ಪತ್ತೆಯಾಗಿದೆ. ಮೃತ ಮಗುವನ್ನು ಸಂತೋಷ್ ನಾಯ್ಕ್ -ರೇಖಾ ನಾಯ್ಕ್ ದಂಪತಿಗಳ ಪುತ್ರಿ ಸಾನ್ವಿಕಾ ನಾಯ್ಕ್ (1.3) ಎಂದು ಗುರುತಿಸಲಾಗಿದೆ.
ಕುಂದಾಪುರ ತಾಲೂಕಿನ ಶಂಕರನಾರಾಯಣ ಠಾಣಾ ವ್ಯಾಪ್ತಿಯ ಎಡಮೊಗ್ಗೆ ಕುಮ್ಟಿಬೇರು ಎಂಬಲ್ಲಿ ರಾತ್ರಿ ತಾಯಿ ಜೊತೆಗೆ ಮಲಗಿದ್ದ ಎರಡು ಪುಟ್ಟ ಮಕ್ಕಳ ಪೈಕಿ ಒಂದು ಹೆಣ್ಣುಮಗುವನ್ನು ದುಷ್ಕರ್ಮಿಯೊಬ್ಬ ಗುರುವಾರ ಮುಂಜಾನೆ ನಾಲ್ಕು ಗಂಟೆಯ ವೇಳೆಗೆ ಕದ್ದೊಯ್ದಿದ್ದ.
ಘಟನೆಯ ವಿವರ:
ಸಂತೋಷ್ ನಾಯ್ಕ್ ಹೊಸಂಗಡಿಯಲ್ಲಿರುವ ಪವರ್ ಪ್ರಾಜೆಕ್ಟ್ನಲ್ಲಿ ವಾಟರ್ಮೇನ್ ಆಗಿ ಕೆಲಸ ಮಾಡಿಕೊಂಡಿದ್ದು, ಬುಧವಾರ ರಾತ್ರಿ ಪಾಳಿಯಿತ್ತೆನ್ನಲಾಗಿದೆ. ಆದ್ದರಿಂದ ಸಂತೋಷ್ ನಾಯ್ಕ್ ಮನೆಯಲ್ಲಿರಲಿಲ್ಲ. ಆತನ ಪತ್ನಿ ರೇಖಾ ನಾಯ್ಕ್ ಹಾಗೂ ಒಬ್ಬ ಮಗ ಸಾತ್ವಿಕ್ ನಾಯ್ಕ್ ಮತ್ತು ಮಗಳು ಸಾನ್ವಿಕಾ ಮೂವರೇ ಮನೆಯಲ್ಲಿದ್ದರು.
ಗುರುವಾರ ಮುಂಜಾನೆ ಸುಮಾರು ನಾಲ್ಕೂವರೆ ಗಂಟೆಗೆ ಮನೆಯ ಹಿಂಬದಿಯ ಬಾಗಿಲಲ್ಲಿ ಒಳನುಗ್ಗಿದ ಬೂದು ಬಣ್ಣದ ಅಂಗಿ ಧರಿಸಿದ ಮುಸುಕುಧಾರಿ ವ್ಯಕ್ತಿಯೊಬ್ಬ ನೇರವಾಗಿ ಮೂವರು ಮಲಗಿದ್ದಲ್ಲಿಗೆ ಬಂದು ತಾಯಿ ಜೊತೆ ಮಲಗಿದ್ದ ಹೆಣ್ಣು ಮಗು ಸಾನ್ವಿಕಾಳನ್ನು ಎತ್ತಿಕೊಂಡಿದ್ದಾನೆ ಎನ್ನಲಾಗಿದೆ. ಮಗು ಅಳುವುದನ್ನು ಕೇಳಿಸಿಕೊಂಡ ನಿದ್ದೆಯ ಮಂಪರಿನಲ್ಲಿದ್ದ ತಾಯಿ ರೇಖಾ ನಾಯ್ಕ್ ಕಣ್ಣು ಬಿಟ್ಟು ನೋಡುವಷ್ಟರಲ್ಲಿ ವ್ಯಕ್ತಿ ಮಗುವನ್ನು ಹೊತ್ತುಕೊಂಡು ಪರಾರಿಯಾಗಿದ್ದು, ಮನೆ ಸಮೀಪದ ಕುಬ್ಜಾ ನದಿಯನ್ನು ದಾಟಿ ನಾಪತ್ತೆಯಾಗಿರುವುದಾಗಿ ತಾಯಿ ತಿಳಿಸಿದ್ದರು.
ಮಗುವನ್ನು ಹೊತ್ತುಕೊಂಡು ಓಡುತ್ತಿದ್ದ ವ್ಯಕ್ತಿಯ ಹಿಂದೆಯೇ ತನ್ನ ಗಂಡು ಮಗುವನ್ನು ಎತ್ತಿಕೊಂಡು ಓಡಿದ್ದ ತಾಯಿ ಅಪರಿಚಿತ ದುಷ್ಕರ್ಮಿಯನ್ನು ಹಿಂಬಾಲಿಸಿ ಹೊಳೆಗೆ ಹಾರಿದ್ದು, ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದರು. ಇವರ ಕಿರುಚಾಟ ಕೇಳಿ ಸ್ಥಳೀಯರು ಇವರನ್ನು ರಕ್ಷಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ತನಿಖೆಯನ್ನು ಚುರುಕುಗೊಳಿಸಿತ್ತು. ಘಟನಾ ಸ್ಥಳಕ್ಕೆ ಎಸ್ಪಿ ನಿಶಾ ಜೇಮ್ಸ್, ಡಿವೈಎಸ್ಪಿ ದಿನೇಶ್ಕುಮಾರ್ ಬಿ.ಪಿ ಆಗಮಿಸಿ ಪರಿಶೀಲನೆ ನಡೆಸಿದ್ದರು. ಶಂಕರನಾರಾಯಣ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು.