ಮಂಗಳೂರು, ಜು 11 (DaijiworldNews/SM): ಡ್ರೆಜ್ಜಿಂಗ್ ಮೂಲಕ ತುಂಬೆ ಡ್ಯಾಂ ಸಮೀಪದ ನೇತ್ರಾವತಿ ನದಿಯಿಂದ ಮೇಲೆತ್ತಲ್ಪಟ್ಟ ಮರಳನ್ನು ಸ್ಯಾಂಡ್ ಬಝಾರ್ ಆ್ಯಪ್ ಮೂಲಕ ಸಾರ್ವಜನಿಕರಿಗೆ ವಿತರಣಾ ಕಾರ್ಯ ಆರಂಭಗೊಂಡಿದೆ. ಇದೀಗ ತುಂಬೆ ಸಮೀಪದ ತಲಪಾಡಿ ಪ್ರದೇಶವು ಸ್ಯಾಂಡ್ ಬಝಾರ್ ಆಗಿ ಮಾರ್ಪಟ್ಟಿದೆ. ಜಿಲ್ಲಾಧಿಕಾರಿಯ ಅನುಮತಿಯ ಬಳಿಕ ತುಂಬೆ ವೆಂಟೆಡ್ ಡ್ಯಾಂನಿಂದ ಸುಮಾರು 500 ಮೀ. ದೂರದಲ್ಲಿ ತಲಪಾಡಿ ಬಳಿ ನದಿಯಿಂದ ಡ್ರೆಜ್ಜಿಂಗ್ ಮೂಲಕ ಹೂಳೆತ್ತುವ ಕಾರ್ಯಾರಂಭಗೊಂಡಿದೆ.
ಇಲ್ಲಿಂದ ಮೇಲೆತ್ತಲ್ಪಟ್ಟ ಮರಳನ್ನು ಪಕ್ಕದ 2 ಯಾರ್ಡ್ನಲ್ಲಿ ಸಂಗ್ರಹಿಸಲಾಗುತ್ತಿದೆ. ಬಳಿಕ ಅದನ್ನು ಸ್ಯಾಂಡ್ ಬಝಾರ್ ಆ್ಯಪ್ ಮೂಲಕ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತಿದೆ. ಸಾಕಷ್ಟು ಪ್ರಮಾಣದಲ್ಲಿ ಮರಳು ದೊರೆಯುತ್ತಿರುವುದರಿಂದ ಸಿಸಿಟಿವಿಯ ಕಣ್ಗಾವಲು ವ್ಯವಸ್ಥೆ ಕಲ್ಪಿಸಲಾಗಿದೆ. ಮಿತ ದರದಲ್ಲಿ ಹಾಗೂ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ಮನೆ ಬಾಗಿಲಿಗೆ ಮರಳು ತಲುಪಿಸುವ ಕಾರ್ಯ ಸ್ಯಾಂಡ್ ಬಝಾರ್ ಆ್ಯಪ್ ಮಾಡಲಿದೆ.
ಆ್ಯಪ್ ಬಳಸುವ ಮೂಲಕ ಸಾರ್ವಜನಿಕರು, ತಮಗೆ ಸಮೀಪದ ಸ್ಥಳದಿಂದಲೇ ಮರಳು ಪಡೆಯಬಹುದಾಗಿದೆ. ಆನ್ಲೈನ್ನಲ್ಲಿ ಮರಳಿಗೆ ಸಂಬಂಧಪಟ್ಟ ದರ ವೀಕ್ಷಿಸಿ ಆನ್ಲೈನ್ ಪಾವತಿ ಮಾಡಿದಲ್ಲಿ ಮನೆ ಬಾಗಿಲಿಗೆ ಮರಳು ತಲುಪಲಿದ್ದು, ಪ್ರತ್ಯೇಕ ವಾಹನ ಬಾಡಿಗೆ ಪಾವತಿಸುವ ಅಗತ್ಯವಿಲ್ಲ. ಅಲ್ಲದೇ, ತಾವು ಮರಳು ಬುಕ್ ಮಾಡಿದ ಬಳಿಕ ಮರಳು ಲೋಡ್ ಆದ ಬಗ್ಗೆ ಯಾವ ವಾಹನದಲ್ಲಿ ಬರುತ್ತಿದೆ ಎನ್ನುವ ಬಗ್ಗೆ ಪ್ರತಿಯೊಂದು ಸಂದೇಶವು ಮೊಬೈಲ್ ಫೋನ್ಮೂಲಕ ಬರಲಿದೆ.
ಬುಕ್ಕಿಂಗ್ನಿಂದ ನೆಟ್ ಬ್ಯಾಂಕಿಂಗ್ ಎಲ್ಲವೂ ಆನ್ಲೈನ್ ಮೂಲಕ ಪಾರದರ್ಶಕತೆಯಿಂದ ನಡೆಯುತ್ತವೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಇತರ ಕಡೆಗಳಲ್ಲಿ ಆರಂಭಿಸಲಾಗುವುದು ಎಂದು ಜಿಲ್ಲಾ ಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.